ಸಂವಿಧಾನಕೆ ನಿಷ್ಠರಾಗಿ ಕೆಲಸ ಮಾಡಿ: ಐಜಿಪಿ ನಂಜುಂಡಸ್ವಾಮಿ
ಶಿವಮೊಗ್ಗ, ಸೆ. 27: ಪೊಲೀಸ್ ಇಲಾಖೆ ಸಿಬ್ಬಂದಿ ಮಾಡುವ ಕೆಲಸ ಇಲಾಖೆ ಮತ್ತು ಸರಕಾರಕ್ಕೆ ಗೌರವ ತಂದುಕೊಡುವ ಹಾಗೆ ಇರಬೇಕು ಎಂದು ಪೂರ್ವವಲಯ ಐಜಿಪಿ ನಂಜುಂಡಸ್ವಾಮಿ ಹೇಳಿದರು.
ಮಂಗಳವಾರ ನಗರದ ಡಿಎಆರ್ ಮೈದಾನದಲ್ಲಿ ಆಯೋಜಿಸಿದ್ದ 12ನೆಯ ಸಿವಿಲ್ ಪೊಲೀಸ್ ನಿರ್ಗಮನ ಮತ್ತು ಪಥಸಂಚಲನ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿದ ನಂತರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆ ಎಂಬುದು ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಇರುವ ಶಕ್ತಿಶಾಲಿ ಅಂಗ. ಸಂವಿಧಾನಕ್ಕೆ ನಿಷ್ಠರಾಗಿ ಕೆಲಸಮಾಡಿ ನಿಮಗೆ ಸಿಕ್ಕಿರುವ ಅಧಿಕಾರವನ್ನು ಉಪಯೋಗಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು. ಪೊಲೀಸ್ ವ್ಯವಸ್ಥೆ ಬಲಿಷ್ಠ ಮತ್ತು ಪವಿತ್ರವಾದುದು. ಸಮಾಜದಲ್ಲಿ ಶಾಂತಿ ಕಾಪಾಡಲು ಎಲ್ಲರೂ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಡಬೇಕು ಮತ್ತು ಸಂವಿಧಾನ ಬದ್ಧವಾಗಿ ನಡೆದುಕೊಳ್ಳಬೇಕು ಎಂದರು.
ಕಾನೂನಿಗೆ ಪ್ರತಿಯೊಬ್ಬರೂ ಗೌರವ ಕೊಡಬೇಕು. ನಿಮ್ಮ ಕಣ್ಣಮುಂದೆ ಯಾವುದೇ ರೀತಿಯ ಅನ್ಯಾಯ ನಿಮಗೆ ಕಂಡರೆ ಅದನ್ನು ಸಹಿಸದಿರಿ.ಪ್ರಜಾಪ್ರಭುತ್ವವನ್ನು ಅದರ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ಕೆಲಸ ನಿಮ್ಮದು. ಪೊಲೀಸ್ ಹುದ್ದೆ ಎಂದರೆ ಯಾವುದೇ ಕೀಳರಿಮೆ ಬೇಡ. ರಾಷ್ಟ್ರದ ಅಭಿವೃದ್ಧ್ದಿ ಮತ್ತು ರಕ್ಷಣೆಯಲ್ಲಿ ಪೊಲೀಸರ ಪಾತ್ರ ಬಹು ಮುಖ್ಯವಾಗಿದೆ. ಇತ್ತೀಚೆಗೆ ಪೊಲೀಸರಿಗೆ ವಿಶೇಷವಾದ ಸೌಲಭ್ಯಗಳಿವೆ ಇವುಗಳನ್ನು ಬಳಸಿಕೊಳ್ಳಿ. ಜೊತೆಗೆ ಕರ್ತವ್ಯದ ಬಗ್ಗೆ ಅರಿವಿರಲಿ. ಆರೋಗ್ಯದ ಕಡೆಯೂ ಗಮನಹರಿಸಬೇಕು, ಸರಕಾರಕ್ಕೆ ಗೌರವ ತಂದು ಕೊಡುವ ಕೆಲಸವಾಗಬೇಕು. ಸಾಮಾನ್ಯ ಜನರೊಂದಿಗೆ ಬೆರೆಯಬೇಕು, ಪೊಲೀಸ್ ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡುವ ಹೊಣೆ ನಿಮ್ಮದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ, ಎಎಸ್ಪಿ ಶಾಂತಕುಮಾರ್ ಉಪಸ್ಥಿತರಿದ್ದರು. ಇದೇ ಸಂದಭರ್ದಲ್ಲಿ ತಮ್ಮ ತಮ್ಮ ಕೆಲಸಕ್ಕೆ ಹಿಂದಿರುಗುವ ಪೊಲೀಸರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಪ್ರಶಿಕ್ಷಣಾರ್ಥಿಗಳು ನಡೆಸಿಕೊಟ್ಟ ಪಥಸಂಚಲನ ಆಕರ್ಷಕವಾಗಿತ್ತು.