ಕೊಡಗು ದಸರಾಕ್ಕೆ ರಾಜ್ಯದ ಬಂಪರ್ ಕೊಡುಗೆ
ಮಡಿಕೇರಿ, ಸೆ. 27: ಮಡಿಕೇರಿ ದಸರಾಕ್ಕೆ 75 ಲಕ್ಷ ರೂ. ಹಾಗೂ ಗೋಣಿಕೊಪ್ಪ ದಸರಾಕ್ಕೆ ಕ್ಕೆ 25 ಲಕ್ಷ ರೂ. ಅನುದಾನ ಸೇರಿ ಈ ಬಾರಿಯ ಕೊಡಗು ದಸರಾಕ್ಕೆ ರಾಜ್ಯ ಸರಕಾರದ ವತಿಯಿಂದ ಬಂಪರ್ ಒಂದು ಕೋಟಿ ರೂ. ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ರಾಜಧಾನಿ ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ದಲ್ಲಿ ತಮ್ಮನ್ನು ಭೇಟಿಯಾದ ಮಡಿಕೇರಿ ನಗರ ದಸರಾ ಸಮಿತಿಯ ಪದಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಹಾಗೂ ಮಾಜಿ ಸಚಿವೆ ಸುಮಾವಸಂತ್ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ದಸರಾ ಸಮಿತಿಯ ಪದಾಧಿಕಾರಿಗಳು ಶತಮಾನದ ಇತಿಹಾಸ ಹೊಂದಿರುವ ಮಡಿಕೇರಿ ದಸರಾ ಉತ್ಸವಕ್ಕೆ ರಾಜ್ಯ ಸರಕಾರ ಕಳೆದ ವರ್ಷ 50 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದು, ಈ ಬಾರಿ ಹೆಚ್ಚಿನ ಅನುದಾನ ನೀಡಬೇಕೆಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ತಮ್ಮನ್ನು ಭೇಟಿ ಮಾಡಿ ದಸರಾ ಆಚರಣೆಗೆ ಅನುದಾನ ನೀಡುವಂತೆ ಕೋರಿದ್ದರು. ಆ ಪ್ರಕಾರವಾಗಿ ಮಡಿಕೇರಿ ದಸರಾಕ್ಕೆ 75 ಲಕ್ಷ ರೂ. ಮತ್ತು ಗೋಣಿಕೊಪ್ಪದಸರಾಕ್ಕೂ 25 ಲಕ್ಷ ರೂ. ಒದಗಿಸುವುದಾಗಿ ಮುಖ್ಯಮಂತ್ರಿಯವರು ಇದೇ ಸಂದರ್ಭ ಭರವಸೆ ನೀಡಿದರು.
ದಸರಾ ಆಚರಣೆಗೆ ಹೆಚ್ಚಿನ ಅನುದಾನ ಮಂಜೂರು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಸರಾ ಸಮಿತಿ ಅಧ್ಯಕ್ಷ ಆದ ನಗರ ಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹೂಗುಚ್ಛ ನೀಡಿ ಕೃತಜ್ಞತೆ ಸಲ್ಲಿಸಿದರು. ಕೊಡಗಿನಲ್ಲಿ ಮಳೆಯಾಗುತ್ತಿರುವ ಬಗ್ಗೆ ನಿಯೋಗದಲ್ಲಿದ್ದ ಪ್ರಮುಖರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದರು.
ನಿಯೋಗದಲ್ಲಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಖಜಾಂಚಿ ಅನಿತಾ ಪೂವಯ್ಯ, ಪ್ರಧಾನ ಕಾರ್ಯದರ್ಶಿ ಎ.ಸಿ. ದೇವಯ್ಯ, ನಗರಸಭಾ ಸದಸ್ಯರಾದ ಮನ್ಸೂರ್, ಎಚ್.ಎಂ. ನಂದಕುಮಾರ್, ಪ್ರಕಾಶ್ ಆಚಾರ್ಯ ಮತ್ತಿತರರಿದ್ದರು.