ವಿಶ್ವ ಪ್ರವಾಸೋದ್ಯಮ ದಿನಾಚರಣೆ
ಶಿವಮೊಗ್ಗ, ಸೆ. 27: ಪ್ರವಾಸೋದ್ಯಮವು ಜನರಿಗಾಗಿ ಇರಬೇಕೇ ಹೊರತು, ಪ್ರವಾ ಸೋದ್ಯಮಕ್ಕಾಗಿ ಜನರು ಎನ್ನುವಂತಾ ಗಬಾರದು ಎಂದು ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ಹೇಳಿದ್ದಾರೆ.
ಮಂಗಳವಾರ ನಗರದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸಿಎನ್‌ಆರ್ ರಾವ್ ಸಭಾಂಗಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಆದರೆ, ಅವುಗಳನ್ನು ಅಭಿವೃದ್ಧಿಪಡಿಸಿ ಬಳಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಗೋವಾ ಮತ್ತು ಕೇರಳ ರಾಜ್ಯಗಳು ತಮ್ಮ ಬಹುತೇಕ ಆದಾಯವನ್ನು ಪ್ರವಾಸೋದ್ಯಮದಿಂದ ಪಡೆಯುತ್ತಿವೆ. ಇದು ನಮ್ಮ ರಾಜ್ಯದಲ್ಲಿ ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.
ಪ್ರವಾಸೋದ್ಯಮ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಂಡು ಮಾಲಿನ್ಯ ರಹಿತ ಹಾಗೂ ಜನಸ್ನೇಹಿ ವಾತಾವರಣ ಉಂಟು ಮಾಡುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಜೋಗವೊಂದನ್ನು ಹೊರತುಪಡಿಸಿ, ಬೇರೆ ಯಾವ ಪ್ರವಾಸಿ ತಾಣಗಳು ತೀರಾ ಮಹತ್ವವನ್ನು ಪಡೆದಿಲ್ಲ. ಅಲ್ಲದೆ, ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿಲ್ಲ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಟ್ರಕ್ಕಿಂಗ್ ಹೆಚ್ಚು ಜನಪ್ರಿಯವಾಗುತ್ತಿದೆ. ಇದಕ್ಕೆ ಅನುಗುಣ ವಾದ ನೂರಾರು ಸ್ಥಳಗಳು ಜಿಲ್ಲೆಯಲ್ಲಿದೆ. ನಮ್ಮಲ್ಲಿರುವ ಪ್ರವಾಸೋದ್ಯಮವನ್ನು ನಾವು ಬಳಸಿಕೊಳ್ಳದೆ ಇತರ ರಾಜ್ಯ ಮತ್ತು ದೇಶಗಳತ್ತ ಗಮನಹರಿ ಸುತ್ತಿದ್ದೇವೆ. ಜಿಲ್ಲೆಯಲ್ಲಿ ಸಾಕಷ್ಟು ಕುಡಿಯುವ ಶುದ್ಧ ನೀರು ಮತ್ತು ಗಾಳಿ ಇದೆ. ಬೇರೆ ಯಾವ ಜಿಲ್ಲೆಯಲ್ಲೂ ಇಂತಹ ವಾತಾವರಣ ಕಾಣಲು ಸಾಧ್ಯವಿಲ್ಲ. ಆದ್ದರಿಂದ ಶಿವಮೊಗ್ಗ ಜನಮಾನಸದಲ್ಲಿ ಮರೆಯಲಾಗದ ಜಿಲ್ಲೆಯಾಗಿ ಉಳಿದಿದೆ. ಇದನ್ನು ಉಳಿಸಿಕೊಂಡು ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವತ್ತ ಚಿಂತನೆ ನಡೆಸಬೇಕಿದೆ ಎಂದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಜಿ. ಶಕುಂತಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು, ಕುವೆಂಪು ವಿವಿ ಪ್ರವಾಸೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಟಿ.ಎ. ಬಿನೋಯ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಹನುಮಾ ನಾಯ್ಕಾ ಉಪಸ್ಥಿತರಿದ್ದರು. ಕಾಲೇಜಿನ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥ ಯು. ಶಶಿರಾಜ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ಇತ್ತೀಚೆಗೆ ಪ್ರವಾಸೋದ್ಯಮ ಇಲಾಖೆ ನಡೆಸಿದ ಟೂರಿಸ್ಟ್ ಗೈಡ್ ತರಬೇತಿಯಲ್ಲಿ ಪಾಲ್ಗೊಂಡ 22 ಜನರಿಗೆ ಜಿಲ್ಲಾಧಿಕಾರಿ ಇದೇ ಸಂದರ್ಭ ಪ್ರಮಾಣ ಪತ್ರ ವಿತರಿಸಿದರು.