×
Ad

ಶಿವಮೊಗ್ಗದಲ್ಲಿ ಮುಂದುವರಿದ ಆಪರೇಷನ್ ಮುಸ್ಕಾನ್-2

Update: 2016-09-27 22:46 IST

 ಸೊರಬ, ಸೆ. 27: ಪಟ್ಟಣದ ವಿವಿಧ ಘಟಕಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ 14 ರಿಂದ 18 ವರ್ಷ ವಯೋಮಿತಿಯೊಳಗಿನ 12 ಬಾಲಕಾರ್ಮಿಕರನ್ನು ಪತ್ತೆ ಹಚ್ಚಿ ರಕ್ಷಿಸಿದ ‘ಆಪ ರೇಷನ್ ಮುಸ್ಕಾನ್-2’ ಕಾರ್ಯಾ ಚರಣೆಯ ಅಧಿಕಾರಿಗಳು ಎಲ್ಲಾ ಮಕ್ಕಳನ್ನು ಪೋಷಕರಿಗೆ ಒಪ್ಪಿಸಿದ ಘಟನೆ ಮಂಗಳವಾರ ನಡೆದಿದೆ.

ಬಾಲಕರು ಪಟ್ಟಣದ ಗ್ಯಾರೇಜು, ಹೋಟೆಲ್ ಸೇರಿದಂತೆ ವಿವಿಧ ಘಟಕಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ, 13 ಬಾಲಕರನ್ನು ವಶಕ್ಕೆ ಪಡೆದರು. ಇವರನ್ನು ತಪಾಸಣೆ ನಡೆಸಿದಾಗ ಒರ್ವ ಬಾಲಕನಿಗೆ 18 ವರ್ಷವಾಗಿರುವುದನ್ನು ಖಚಿತ ಪಡಿಸಿಕೊಂಡು ಆತನನ್ನು ಬಿಡುಗಡೆ ಗೊಳಿಸಿದರು. ಉಳಿದ 12 ಬಾಲಕಾರ್ಮಿಕರ ಪೋಷಕರನ್ನು ಕರೆಸಿ ತಿಳಿಹೇಳಿದ್ದಾರೆ. ಅಲ್ಲದೆ, ಅವರೊಂದಿಗೆ ಕಳುಹಿಸಿಕೊಟ್ಟರುವ ಅಧಿಕಾರಿಗಳು ಶನಿವಾರ ಮಕ್ಕಳೊಂದಿಗೆ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ.

ಸರಕಾರದ ಆದೇಶದಂತೆ 18 ವರ್ಷ ದೊಳಗಿನ ಬಾಲಕಾರ್ಮಿಕರನ್ನು ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳುವಂತಿಲ್ಲ. ದುಡಿಸಿಕೊಳ್ಳುವುದು ಖಚಿತವಾದಲ್ಲಿ ಅಂತವರ ಮೇಲೆ ಕ್ರಮ ಕೈಗೊಂಡು, ಬಾಲಕಾರ್ಮಿಕರ ಶ್ರಮಕ್ಕೆ ಅನುಗುಣವಾಗಿ 60 ಸಾವಿರ ರೂ. ವರೆಗೂ ದಂಡ ವಿಧಿಸಿ, ಆ ದಂಡದಿಂದ ಬಂದ ಹಣವನ್ನು ಬಾಲಕರ ಬ್ಯಾಂಕ್ ಖಾತೆಗೆ ಜಮಾ ಮಾಡಿ, ಅವರ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಲು ಸೂಚಿಸಲಾಗುವುದು ಎಂದು ಡಿಸಿಬಿ ವೃತ್ತ ನಿರೀಕ್ಷಕ ಕುಮಾರ್ ಪತ್ರಿಕೆಗೆ ತಿಳಿಸಿದರು. ಕಾರ್ಯಾಚರಣೆಯಲ್ಲಿ ಜಿಲ್ಲಾ ಕಾರ್ಮಿಕ ನಿರೀಕ್ಷಕ ಹರೀಶ್ ಕುಮಾರ್, ತಾಲೂಕು ಕಾರ್ಮಿಕ ನಿರೀಕ್ಷಕ ಶಿವಕುಮಾರ್, ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯೆ ಜಿ.ಎಂ. ರೇಖಾ, ತಾಲೂಕು ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ಇಲಾಖೆ ಅಧಿಕಾರಿ ನಾಗರತ್ನಾ ನಾಯಕ್, ಪಿಎಸ್ಸೈ ಮಂಜುನಾಥ್ ಅರ್ಜುನ್ ಲಿಂಗಾರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸ್ವಯಂ ಸೇವಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News