×
Ad

‘ವರಕವಿ’ಯ ಪುತ್ರ, ಹಿರಿಯ ಸಾಹಿತಿ ಡಾ.ವಾಮನ ಬೇಂದ್ರೆ ವಿಧಿವಶ

Update: 2016-09-28 10:39 IST

ಹುಬ್ಬಳ್ಳಿ, ಸೆ.28: ವರಕವಿ ದ.ರಾ.ಬೇಂದ್ರೆಯವರ ದ್ವಿತೀಯ ಪುತ್ರ ಹಿರಿಯ ಸಾಹಿತಿ ಡಾ.ವಾಮನ ಬೇಂದ್ರೆ ಇಂದು ಮುಂಜಾವ 4:30ಕ್ಕೆ ನಿಧನರಾದರು.
ಅವರಿಗೆ 82 ವರ್ಷ ವಯಸ್ಸಾಗಿತ್ತು. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಪಾರ್ಥಿವ ಶರೀರವನ್ನು ಧಾರವಾಡದ ಅವರ ನಿವಾಸ ಮಾತಾಕ್ಕೆ ತರಲಾಗಿದ್ದು, ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮೃತರು ಓರ್ವ ಪುತ್ರಿ, ಸಹೋದರಿ ಹಾಗೂ ಅಪಾರ ಬಂಧುಮಿತ್ರರು, ಅಭಿಮಾನಿಗಳನ್ನು ಅಗಲಿದ್ದಾರೆ.
ಸಂಜೆ ಹೊಸ ಯಲ್ಲಾಪುರದ ರುದ್ರಭೂಮಿಯಲ್ಲಿ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನೆರವೇರಲಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ 1935ರ ಜುಲೈ 28ರಂದು ಜನಿಸಿದ್ದ ವಾಮನ ಬೇಂದ್ರೆಯವರು ವರಕವಿ ದ.ರಾ.ಬೇಂದ್ರೆ, ತಾಯಿ ಲಕ್ಷ್ಮೀಬಾಯಿ ದಂಪತಿಯ ಪುತ್ರ.
 ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ.ಎ. ಮತ್ತು ಎಂ.ಎ. ಪದವಿ ಪಡೆದಿದ್ದ ವಾಮನ ಬೇಂದ್ರೆ, ಪುಣೆ ವಿಶ್ವವಿದ್ಯಾಲಯದಲ್ಲಿ ಮಂಡಿಸಿದ ‘ಲಕ್ಷ್ಮೀಶನ ಜೈಮಿನಿ ಭಾರತ ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದಿದ್ದಾರೆ.
ಬಳಿಕ ಧಾರವಾಡದ ವಿದ್ಯಾರಣ್ಯ ಕಿರಿಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಕಿಟಲ್ ಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ್ದರು.

ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿ ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಿದ್ದರು. ಸಂಗೀತ, ನಾಟಕ, ಭಾಷಣ ಮುಂತಾದ ಕಲೆಗಳನ್ನು ಸಹ ತಮ್ಮ ಹವ್ಯಾಸವಾಗಿರಿಸಿಕೊಂಡಿದ್ದ ವಾಮನ ಬೇಂದ್ರೆಯವರ ಪ್ರಥಮ ಕವನ ‘ಮೊದಲ ತೊದಲು’. ನಂತರ ‘ಅನಂತಧಾರೆ’, ‘ಸ್ಪಂದನ’ ಪ್ರಕಟಗೊಂಡವು. ‘ಸೊಂಡಿಲ ಗಣಪ್ಪಬಂದ’, ‘ಸ್ಪರ್ಶ’ ಹಾಗೂ ಇತರ ನಾಟಕಗಳೂ ಸೇರಿ ಮೂವತ್ತಕ್ಕೂ ಹೆಚ್ಚು ರೇಡಿಯೊ ನಾಟಕಗಳ ರಚನೆ ಮಾಡಿದ್ದರು.
ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವಿದ್ಯಾರಣ್ಯ ಪ್ರಶಸ್ತಿ, ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಪರಶುರಾಮ ಪ್ರಶಸ್ತಿ, ಕನ್ನಡಮರಾಠಿ ಭಾಷಾ ಬಾಂಧವ್ಯ ಪ್ರಶಸ್ತಿ, ಶ್ರೀವರದರಾಜ ಆದ್ಯ ಸಾಹಿತ್ಯ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ವಾಮನ ಬೇಂದ್ರೆಯವರಿಗೆ ಸಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News