×
Ad

ಕಸ ವಿಲೇವಾರಿಯ ವಾಹನಗಳನ್ನು ಸದುಪಯೋಗಪಡಿಸಿಕೊಳ್ಳಿ: ರಮೀಝಾಬಿ

Update: 2016-09-28 21:55 IST

ಮೂಡಿಗೆರೆ, ಸೆ.28: ಇಲ್ಲಿನ ಪಟ್ಟಣ ಪಂಚಾಯತ್ ನೂತನ ಅಧ್ಯಕ್ಷೆ ರಮೀಝಾಬಿ ಇಮ್ತಿಯಾಝ್ ಅಧಿಕಾರ ವಹಿಸಿದ ದಿನದಿಂದ ಪ್ರತಿ ದಿನ ಬೆಳಗ್ಗೆ ಪೌರ ಕಾರ್ಮಿಕರೊಂದಿಗೆ ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಸ್ವಚ್ಛತೆ ಕಾರ್ಯದಲ್ಲಿ ತೊಡಗಿರುವುದು ಕಂಡು ಬರುತ್ತಿದ್ದು, ಸ್ಥಳೀಯ ಜನರು ಇದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಬುಧವಾರ ತಮ್ಮನ್ನು ಭೆೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಚ್ಛಭಾರತ್ ಯೋಜನೆಯನ್ನು ಪಪಂ ವ್ಯಾಪ್ತಿಯಲ್ಲೂ ಜಾರಿಗೊಳಿಸಲಾಗಿದೆ. ಇಂದು ಸ್ವಚ್ಛತೆ ಬಗ್ಗೆ ಗಮನ ಹರಿಸದೆ ವಿವಿಧ ಕಾಮಗಾರಿಗಳಿಗೆ ದಾರಿ ಮಾಡಿಕೊಡಲಾಗುತ್ತಿದೆ. ಇದನ್ನರಿತುಕೊಂಡು ಪಟ್ಟಣದ ಜನತೆಗೆ ರೋಗ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ಧ್ವನಿ ವರ್ಧಕದ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಮನೆಯಲ್ಲಿ ಬಿಸಿ ನೀರು ಹೆಚ್ಚಾಗಿ ಬಳಸಬೇಕೆಂದು ಸೂಚಿಸಲಾಗಿದೆ ಎಂದರು.

ಕಸ ವಿಲೇವಾರಿಗೆ 3 ಆಟೊ ಟಿಪ್ಪರ್, 1 ಟ್ರಾಕ್ಟರ್ ಬಳಸುತ್ತಿದ್ದು, ಪಟ್ಟಣದ ಜನತೆ ಇದನ್ನು ಬಳಸಿಕೊಳ್ಳುವುದರಲ್ಲಿ ವಿಫಲರಾಗಿದ್ದು, ರಸ್ತೆ ಬದಿಯಲ್ಲಿ ಕಸವನ್ನು ಹಾಕಿ ಪರಿಸರ ಮಾಲಿನ್ಯ ಮಾಡುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರು ಕಸವನ್ನು ರಸ್ತೆ ಬದಿಗೆ ಹಾಕದೇ ನಮ್ಮ ವಾಹನಕ್ಕೆ ಹಾಕಿ ಸಹಕರಿಸಬೇಕು. ಇಲ್ಲವಾದರೆ ರಸ್ತೆ ಬದಿಯಲ್ಲಿ ಕಸ ಹಾಕುವವವರಿಗೆ ದಂಡ ಹಾಕುವುದರ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

 ಹಿಂದೆ ಪಪಂನ ಸ್ವಚ್ಛತೆ ಬಗ್ಗೆ ಗಮನ ಹರಿಸಿದ ಮಾಜಿ ಬೋರ್ಡ್ ಅಧ್ಯಕ್ಷೆ ತಾರಾದೇವಿ, ಪಪಂ ಮಾಜಿ ಅಧ್ಯಕ್ಷ ನಝೀರ್ ಸಾಬ್, ಮಾಕೋನಹಳ್ಳಿ ಸೋಮೇಗೌಡ ಅವರು ಪಟ್ಟಣದ ಬಗ್ಗೆ ವಿಶೇಷ ಕಾಳಜಿ ವಹಿಸಿ ಬೆಳಗ್ಗೆ ಎಲ್ಲ ವಾರ್ಡ್‌ಗಳಲ್ಲಿ ಸಂಚರಿಸಿ ಕೆಲಸ ಮಾಡುತ್ತಿದ್ದರು. ಅವರ ಕೆಲಸಗಳು ನಮಗೆ ಸ್ಫೂರ್ತಿಯಾಗಿದೆ. ನಮ್ಮ ಅಧಿಕಾರಾವಧಿಯಲ್ಲಿ ಪ್ರತಿನಿತ್ಯ ಸ್ವಚ್ಛತೆಗೆ ಹೆಚ್ಚು ಒತ್ತು ಕೊಟ್ಟು ಉತ್ತಮ ಪರಿಸರ ನಿರ್ಮಿಸಲು ಶ್ರಮ ವಹಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News