×
Ad

ಮರಳುಗಾರಿಕೆಯಿಂದ ರಸ್ತೆ ಹಾನಿ: ಗ್ರಾಮಸ್ಥರ ಆರೋಪ

Update: 2016-09-28 22:15 IST

ಕಾರವಾರ, ಸೆ.28: ಕಳೆದೊಂದು ವರ್ಷದಿಂದ ಅಕ್ರಮವಾಗಿ ಮರಳು ಸಾಗಾಟ ಹೆಚ್ಚಾಗಿದ್ದು, ತಾಲೂಕಿನ ಹಳಗಾ ಗ್ರಾಮದಲ್ಲಿನ ರಸ್ತೆಗಳು ಸಂಪೂರ್ಣ ಹಾಳಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಅನಧಿಕೃತವಾಗಿ ಭಾರೀ ಪ್ರಮಾಣದಲ್ಲಿ ಮರಳು ಸಾಗಾಟ ನಡೆಯುತ್ತಿರುವುದರಿಂದ ಕಳೆದ ವರ್ಷ 1.95 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ರಸ್ತೆ ಹದಗೆಟ್ಟಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಕಾತ್ನೆ-ಬೋಳಿಶಟ್ಟಾ ಮಾರ್ಗವಾಗಿ ರಸ್ತೆ ನಿರ್ಮಿಸಲಾಗಿದ್ದು, ಈಗ ಆ ರಸ್ತೆಯ ಮೂಲಕ ಸಂಚರಿಸುವಂತಿಲ್ಲ.

ಮರಳು ಅವ್ಯವಹಾರದ ಬಗ್ಗೆ ಸ್ಥಳೀಯರು ಸಾಕಷ್ಟು ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಗ್ರಾಮವು ಘಡಸಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ್ದು, ಮರಳು ಸಾಗಾಟದ ಬಗ್ಗೆ ಅರಿವಿದ್ದರೂ ಪಂಚಾಯತ್ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಕನಿಷ್ಠ ಪಕ್ಷ ತಮ್ಮ ವ್ಯಾಪ್ತಿಯಲ್ಲಿನ ರಸ್ತೆ ಕಾಪಾಡಿಕೊಳ್ಳುವಲ್ಲಿಯೂ ಪಂಚಾಯತ್ ಆಡಳಿತ ವಿಫಲವಾಗಿದೆ. ಇದರ ಜೊತೆಯಲ್ಲಿ ಮರಳುದಂಧೆಯಲ್ಲಿ ಪಂಚಾಯತ್ ಸದಸ್ಯರೇ ನೇರವಾಗಿ ಶಾಮೀಲಾಗಿರುವ ಆರೋಪ ಎದುರಾಗಿದೆ. ರಸ್ತೆ ಪಕ್ಕದ ಗಟಾರದಲ್ಲಿ ತುಂಬಿದ ಹೂಳನ್ನು ತೆಗೆದಿಲ್ಲ. ಮರಳು ಗಾಡಿಗಳ ಓಡಾಟದ ಪರಿಣಾಮವಾಗಿ ರಸ್ತೆ ಮೋರಿಗಳಲ್ಲಿಯೂ ಮರಳುತುಂಬಿಕೊಂಡಿದೆೆ. ಹಳಗಾ-ಉಳಗಾ ಭಾಗದ ರಸ್ತೆ ಹದಗೆಟ್ಟಿರುವ ಬಗ್ಗೆ ಗ್ರಾಮಸ್ಥರು ಸ್ಥಳೀಯ ಜಿಪಂ ಸದಸ್ಯರ ಗಮನಕ್ಕೆ ತಂದಿದ್ದರೂ ಜಿಪಂ ಪ್ರತಿನಿಧಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈ ನಡುವೆ ಜಿಪಂ ಅಧೀನದಲ್ಲಿರುವ ರಸ್ತೆ ನಿರ್ವಹಣಾ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸುವ ಪ್ರಯತ್ನ ನಡೆಯುತ್ತಿದೆ. ಆದ್ದರಿಂದ ಜಿಲ್ಲೆಯ ಅಧಿಕಾರಿಗಳು ಹಾಗೂ ಹಿರಿಯ ಜನಪ್ರತಿನಿಧಿಗಳು ಮರಳು ವ್ಯವಹಾರಕ್ಕೆ ಕಡಿವಾಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News