×
Ad

ರಸ್ತೆ ದುರಸ್ತಿ ಗೆ ಆಗ್ರಹಿಸಿ ರಿಕ್ಷಾ ಯೂನಿಯನ್‌ನಿಂದ ಧರಣಿ

Update: 2016-09-28 22:18 IST

ಹೊನ್ನಾವರ, ಸೆ.28: ಪಟ್ಟಣದ ಕರ್ಕಿ ನಾಕಾದಿಂದ ದುರ್ಗಾಕೇರಿ ತಲುಪುವ ಬಾಂದೆಹಳ್ಳದ ರಸ್ತೆ ಸಂಪೂರ್ಣ ಹಾಳಾಗಿದ್ದು, ತಕ್ಷಣ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಯೂನಿಯನ್ ಆಟೊರಿಕ್ಷಾ ಚಾಲಕರು ಹಾಗೂ ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

 ರಸ್ತೆಯಲ್ಲಿ ಆಳವಾದ ಹೊಂಡಗಳು ಬಿದ್ದಿದ್ದು, ಮಳೆಯ ನೀರು ರಸ್ತೆಯಲ್ಲಿ ಹರಿದು ಇನ್ನಷ್ಟು ಹದಗೆಟ್ಟು ಸಾರ್ವಜನಿಕರು ಪರದಾಡುವಂತಾಗಿದೆ. ಹೀಗಿದ್ದರೂ ಪಟ್ಟಣ ಪಂಚಾಯತ್‌ರಸ್ತೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಪಟ್ಟಣದ ದುರ್ಗಾಕೇರಿಯಿಂದ ಕರ್ಕಿ ನಾಕಾವರೆಗಿನ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಮತ್ತು ಪಾದಚಾರಿಗಳು ಸಂಚರಿಸುವ ಈ ಮುಖ್ಯ ರಸ್ತೆಗೆ ದುರಸ್ತಿ ಮಾಡದೇ ನಿಷ್ಕಾಳಜಿ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರಿಕ್ಷಾ ಯೂನಿಯನ್ ಅಧ್ಯಕ್ಷ ಶಿವರಾಜ ಮೇಸ್ತ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮಲತಾಯಿ ಧೋರಣೆ ನೀತಿ ಅನುಸರಿಸುತ್ತಿದ್ದಾರೆ. ಈ ಭಾಗದಲ್ಲಿ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಅಭಿವೃದ್ಧಿಯ ಹೆಸರಿನಲ್ಲಿ ಕೇವಲ ಆಶ್ವಾಸನೆ ನೀಡುತ್ತಾರೆ. ಕುಮಟಾ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿಯಾಗುತ್ತಿದೆ. ಹೊನ್ನಾವರ ಪಟ್ಟಣಗಳಲ್ಲಿ ಅಭಿವೃದ್ಧಿಯಾಗಬೇಕಾದರೆ ನಾವು ಪ್ರತಿಭಟನೆಯ ಮೂಲಕ ಜನಪ್ರತಿನಿಧಿಗಳ ಗಮನ ಸೆಳೆಯಬೇಕಾಗಿದೆ ಎಂದರು.

ಸ್ಥಳಕ್ಕೆ ಶಾಸಕಿ ಶಾರದಾ ಶೆಟ್ಟಿ ಭೇಟಿ ನೀಡಿ ಸಮಸ್ಯೆಯ ಕುರಿತು ಅವಲೋಕಿಸಿದರು. ನಂತರ ಪ್ರತಿಭಟನಾಕಾರರು ಶಾಸಕರಲ್ಲಿ ಮನವಿ ಸಲ್ಲಿಸಿದರು. ಶಾಸಕಿ ಶಾರದಾ ಶೆಟ್ಟಿ ಮಾತನಾಡಿ, ಪಟ್ಟಣ ಪಂಚಾಯತ್‌ಗೆ ಸರಕಾರದಿಂದ ಅನುದಾನ ಕಡಿಮೆ ಬಂದಿದೆ. ಪಟ್ಟಣದ 18 ವಾರ್ಡ್‌ಗಳನ್ನು ಅಭಿವೃದ್ಧಿ ಮಾಡಲು ಪಪಂ ಸದಸ್ಯರು ಹಾಗೂ ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ. ಮುಂದಿನ 8 ತಿಂಗಳೊಳಗಾಗಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುತ್ತೇನೆ ಎಂದರು. ಶಾಸಕರ ಭರವಸೆಗೆ ಸ್ಪಂದಿಸಿದ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು. ಪ್ರತಿಭಟನೆಯಲ್ಲಿ ದತ್ತಾತ್ರೆಯ ನಾಯ್ಕ, ಜಾಕಿ ಡಿಸೋಜ, ಉಮೇಶ ಸಾರಂಗ, ಪಪಂ ಸದಸ್ಯ ಬಾಳಾ ಬಾಳೇರಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News