ಆಪರೇಷನ್ ಮುಸ್ಕಾನ್-2 ಕಾರ್ಯಾಚರಣೆ
ಶಿವಮೊಗ್ಗ, ಸೆ. 28: ರಾಜ್ಯ ಸರಕಾರದ ಸೂಚನೆಯಂತೆ ಶಿವಮೊಗ್ಗ ಜಿಲ್ಲಾದ್ಯಂತ ‘ಆಪರೇಷನ್ ಮುಸ್ಕಾನ್-2’ ಕಾರ್ಯಾಚರಣೆ ಚುರುಕುಗೊಳಿಸಿರುವ ಜಿಲ್ಲಾ ಪೊಲೀಸ್‌ಇಲಾಖೆ ಮತ್ತು ವಿವಿಧ ಇಲಾಖೆಗಳ ತಂಡ ಇಂದು ಸಾಗರದಾದ್ಯಂತ ವಿವಿಧೆಡೆ ದಾಳಿ ನಡೆಸಿ 44 ಮಂದಿ ಬಾಲ ಕಾರ್ಮಿಕರನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಇಲಾಖೆಯ ಸುಪರ್ದಿಗೆ ಒಪ್ಪಿಸಿದ್ದಾರೆ.
ಇತ್ತೀಚೆಗಷ್ಟೆ ಶಿವಮೊಗ್ಗ, ಭದ್ರಾವತಿ, ಶಿಕಾರಿ ಪುರ ಸೇರಿದಂತೆ ಕೆಲವೆಡೆ ದಾಳಿ ನಡೆಸಿದ್ದ ‘ಆಪರೇಷನ್ ಮುಸ್ಕಾನ್ -2’ ಕಾರ್ಯಾ ಚರಣೆಯ ತಂಡ ಸುಮಾರು 90ಕ್ಕೂ ಅಧಿಕ ಬಾಲ ಕಾರ್ಮಿಕರನ್ನು ಸಂರಕ್ಷಣೆ ಮಾಡಿತ್ತು. ಆದರೆ, ಇಂದು ಸಾಗರ ಪಟ್ಟಣದ ವಿವಿಧೆಡೆ ಕೆಲಸ ನಿರ್ವಹಿಸುತ್ತಿದ್ದ 44 ಬಾಲಕಾರ್ಮಿಕರನ್ನು ಅಧಿಕಾರಿಗಳ ವಿಶೇಷ ತಂಡ ಪತ್ತೆಹಚ್ಚಿ ಸಂರಕ್ಷಣೆ ಮಾಡಿದೆ.
ಕಾರ್ಯಾಚರಣೆ: ಬಾಲ ಕಾರ್ಮಿಕರ ರಕ್ಷಣೆಗಾಗಿ ರಾಜ್ಯ ಸರಕಾರ ‘ಆಪರೇಷನ್ ಮುಸ್ಕಾನ್ - 2’ ಎಂಬ ಕಾರ್ಯಾಚರಣೆ ಆರಂಭಿಸಿದ್ದು, ಇದರನ್ವಯ ಜಿಲ್ಲಾ ಪೊಲೀಸ್ ಇಲಾಖೆಯು ಜಿಲ್ಲೆಯ ವಿವಿಧೆಡೆ ಕೆಲಸ ಮಾಡುತ್ತಿರುವ 16 ವರ್ಷ ವಯೋಮಾನದೊಳಗಿನ ಕಾರ್ಮಿಕರ ಪತ್ತೆಗೆ ಮುಂದಾಗಿದೆ. ಕಾರ್ಯಾಚರಣೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತಂಡವೊಂದನ್ನು ರಚಿಸಲಾಗಿದೆ. ಇದರಲ್ಲಿ ಪೊಲೀಸ್ ಅಧಿಕಾರಿ-ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಬಾಲ ನ್ಯಾಯ ಮಂಡಳಿ, ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಘಟಕ ದವರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಈ ತಂಡು ಬಾಲ ಕಾರ್ಮಿಕರು ಕಾರ್ಯನಿರ್ವಹಣೆ ಮಾಡುತ್ತಿರುವ ಸ್ಥಳಗಳ ಮೇಲೆ ದಿಢೀರ್ ದಾಳಿ ನಡೆಸಿ, ಬಾಲ ಕಾರ್ಮಿಕರ ಪತ್ತೆ ಮಾಡುತ್ತಿದೆ. ಬಾಲ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡರೆ ವಿಧಿಸ ಬಹುದಾದ ದಂಡ - ಶಿಕ್ಷೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಸುತ್ತಿದೆ. ಜೊತೆಗೆ ಬಾಲ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸ್ಥಳದ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೂಡ ಜರಗಿಸುತ್ತಿದೆ.