ಅಧಿಕಾರಿಗಳ ಅಮಾನತಿನ ಅಧಿಕಾರ ಜಿಲ್ಲಾಧಿಕಾರಿಗಿಲ್ಲ
ಕಾರವಾರ, ಸೆ.28: ರಾಜ್ಯದ ಯಾವುದೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಹಿರಿಯ ಅಧಿಕಾರಿಗಳನ್ನು ಅಮಾನತಿನಲ್ಲಿರಿಸುವ ಅಧಿಕಾರ ಜಿಲ್ಲಾಧಿಕಾರಿಗೆ ಇಲ್ಲ ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಡಾ. ವಿಶಾಲ್ ಆರ್. ಆದೇಶ ಹೊರಡಿಸಿದ್ದಾರೆ. ಸೆ. 23ರಂದು ಪೌರಾಡಳಿತ ಕಚೇರಿಯಿಂದ ಎಲ್ಲ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಅಧಿ ಸೂಚನೆ ಹೊರಡಿಸಲಾಗಿದೆ. ನಗರ ಸಂಸ್ಥೆಗಳ ಅಧಿಕಾರಿಗಳು ಭ್ರಷ್ಟಾಚಾರ, ಹಣ ದುರುಪಯೋಗ, ಕರ್ತವ್ಯ ಲೋಪ ಇನ್ನಿತರ ಆರೊೀಪ ಎದುರಿಸುತ್ತಿದ್ದಲ್ಲಿ ಅವರ ವಿರುದ್ಧ ಪ್ರಾಥಮಿಕ ತನಿಖಾ ವರದಿ ರಚಿಸಿ ದಾಖಲೆಗಳೊಂದಿಗೆ ಸಂಬಂಧಿಸಿದ ಇಲಾ ಖೆಗೆ ರವಾನಿಸುವುದು ಮಾತ್ರ ಜಿಲ್ಲಾಡಳಿತದ ಕೆಲಸ ಎನ್ನುವ ಬಗ್ಗೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ನಗರಸಭೆ ಅಧಿಕಾರಿಗಳ ಕೆಲಸದಲ್ಲಿ ಲೋಪ ಕಂಡು ಬಂದರೂ ಜಿಲ್ಲಾಧಿಕಾರಿಯವರಿಗೆ ಅವರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಬಹುದು. ಆದರೆ ಅಧಿಕಾರಿಯನ್ನು ಅಮಾನತು ಮಾಡುವ ಅಧಿಕಾರ ಇರುವುದಿಲ್ಲ. ಅಧಿಸೂಚನೆಯಲ್ಲಿ ಸಿ ದರ್ಜೆಯ ನೌಕರರು ತಪ್ಪು ಮಾಡಿದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಆಯಾ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಹಿರಿಯ ಅಧಿಕಾರಿಗಳನ್ನು ಇಲಾಖಾ ವಿಚಾರಣೆಯ ಹೆಸರಿನಲ್ಲಿ ಅಮಾನತು ಮಾಡುತ್ತಿದ್ದಾರೆ.