ಹಣ ನೀಡದ ಕಾರಣಕ್ಕೆ ಬೆಂಕಿಯಿಕ್ಕಿ ಮಹಿಳೆಯ ಕೊಲೆ
ಮುಂಡಗೋಡ, ಸೆ.29: ಹಣ ಕೊಡಲು ನಿರಾಕರಿಸಿದ ಮಹಿಳೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಕೊಲೆಗೈದ ಘಟನೆ ತಾಲೂಕಿನ ಜೋಡಿ ಕಟ್ಟಾ ಗ್ರಾಮದಲ್ಲಿ ಬುಧವಾರ ನಡೆದಿದೆ
ಮಮತಾ ಗಂಗು ಬಜಾರೆ(32) ಮೃತಪಟ್ಟ ಮಹಿಳೆ. ಬೆಂಕಿ ಹಚ್ಚಿದ ಆರೋಪಿಯನ್ನು ನಾಗರಾಜ ನಾಯ್ಕ ಎಂದು ಗುರುತಿಸಲಾಗಿದೆ.
ಮಮತಾರ ಮನೆಗೆ ಬರುತ್ತಿದ್ದ ನಾಗರಾಜ ಆಗಾಗ ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ಹೇಳಲಾಗಿದೆ. ಸೆ.26ರಂದು ರಾತ್ರಿ 8 ಗಂಟೆ ಸುಮಾರಿಗೆ ಮಮತಾರ ಮನೆಗೆ ಬಂದ ಆರೋಪಿ ನಾಗರಾಜ ಹಣ ಕೇಳಿದ್ದಾನೆ. ಕುಡಿದ ಮತ್ತಿನಲ್ಲಿದ್ದ ನಾಗರಾಜನಿಗೆ ಹಣ ನೀಡಲು ಮಮತಾ ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆತ ಮಮತಾರ ಮೇಲೆ ಸೀಮೆ ಎಣ್ಣಿ ಸುರಿದು ಬೆಂಕಿ ಹಚ್ಚಿದ್ದಾನೆ. ಇದರಿಂದ ಗಂಭೀರ ಗಾಯಗೊಂಡಿದ್ದ ಮಮತಾರನ್ನು ತಕ್ಷಣ ಮಳಗಿ ಗ್ರಾಮದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಮತಾ ಬುಧವಾರ ಮೃತಪಟ್ಟಿದ್ದಾರೆ. ಈ ಕುರಿತು ಮುಂಡಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.