ಕೋಟ್ಯಂತರ ರೂ.ಬೆಲೆ ಬಾಳುವ ಸರಕಾರಿ ಜಾಗ ವಶಕ್ಕೆ
<ಎಚ್.ಎಂ ರಘು
ಕುಶಾಲನಗರ, ಸೆ.29: ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಸರಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳು ಕಬಳಿಕೆ ಮಾಡಿಕೊಂಡಿರುವುದನ್ನು ಮನಗಂಡಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಜಾಗವನ್ನು ಪಂಚಾಯತ್‌ನ ವಶಕ್ಕೆ ಪಡೆದುಕೊಂಡ ಘಟನೆ ವರದಿಯಾಗಿದೆ.
ಪಟ್ಟಣವು ದಿನದಿಂದ ದಿನಕ್ಕೆ ಬೆಳೆದಂತೆ ಭೂಮಿಯ ಬೆಲೆೆ ಗಗನಕ್ಕೆ ಏರುತ್ತ್ತಿದೆ. ಹೊಸದಾಗಿ ಆರಂಭಗೊಳ್ಳುತ್ತಿರುವ ಸಾಯಿ ಬಡವಾಣೆಯಲ್ಲಿ ಸರಕಾರಿ ಜಾಗವಿದ್ದು, ಅದರಲ್ಲಿ 22ಸೆಂಟ್ಸ್ ಜಾಗವನ್ನು ಬಡಾವಣೆಯ ಮಾಲಕರು ಅಕ್ರಮವಾಗಿ ವಶಕ್ಕೆ ತೆಗೆದುಕೊಂಡು ಕಟ್ಟಡವನ್ನು ಕಟ್ಟುತ್ತಿರುವ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಎ.ಎಂ ಶ್ರೀಧರ್ ಹಾಗೂ ಅಧ್ಯಕ್ಷ ಎಂ.ಎಂ.ಚರಣ್‌ರವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿದಾಗ 1.50 ಕೋಟಿ ರೂ. ಬೆಲೆ ಬಾಳುವ ಸರಕಾರಿ ಜಾಗ ಕಬಳಿಕೆ ಆಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕಟ್ಟಡ ಕಾಮಗಾರಿ ನಿಲ್ಲಿಸಿ, ಸರಕಾರಿ ಜಾಗಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದವರಿಗೆ ನೋಟಿಸ್ ನೀಡಿ, ಕಟ್ಟಡವನ್ನು ನೆಲೆ ಸಮಗೊಳಿಸುವಂತೆ ತಿಳಿಸಿ ಪಂಚಾಯತ್‌ನ ಆಸ್ತಿ ಎಂಬ ನಾಮಫಲಕ ಹಾಕಲು ಮುಂದಾದರು.
ಈಗಾಗಲೇ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತೆ ಮರುಕಳಿಸದಂತೆ ಅಧಿಕಾರಿಗಳು ಹಾಗೂ ಪ್ರತಿನಿಧಿಗಳು ಸರಕಾರದ ಜಾಗವನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ.
ಸಾಯಿ ಬಡವಾಣೆಯಲ್ಲಿ ಸರಕಾರದ ಕಡಂಗ ಜಾಗವಿದ್ದು, ಆ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟುತ್ತಿರುವ ಬಗ್ಗೆ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದೆವು. ಈ ಸಮಯದಲ್ಲಿ ಅರ್ಧಭಾಗ ಕಟ್ಟಡವನ್ನು ಕಟ್ಟಿರುವುದು ಗಮನಿಸಿ ದಾಖಲೆಗಳನ್ನು ಪರಿಶೀಲಿಸಿದಾಗ 22 ಸೆಂಟ್ಸ್ ಸರಕಾರಿ ಕಡಂಗ ಜಾಗವೆಂದು ತಿಳಿದುಬಂದಿದೆ. ಕೂಡಲೇ ಕಟ್ಟಡದ ಕಾಮಗಾರಿಯನ್ನು ನೆಡೆಸದಂತೆ ತಿಳಿಸಿ, ಸರ್ವೇ ಮಾಡಿದಾಗ ಒತ್ತುವರಿಯಾಗಿರುವುದು ಕಂಡುಬಂದಿದೆ. ಆದ್ದರಿಂದ ಈ ಜಾಗವನ್ನು ಪಂಚಾಯತ್ ವಶಕ್ಕೆ ತೆಗೆದುಕೊಂಡು, ಇಂತಹ ವ್ಯಕ್ತಿಗಳ ವಿರುದ್ದ ಶಿಸ್ತು ಕ್ರಮಕೈಗೊಳ್ಳಲಾಗುವುದು.
-ಎ.ಎಂ.ಶ್ರೀಧರ್, ಪಂಚಾಯತ್ ಮುಖ್ಯಾಧಿಕಾರಿ