×
Ad

ಸೊರಬವನ್ನು ಬರಪೀಡಿತವೆಂದು ಘೋಷಿಸದಿರುವುದು ಖಂಡನೀಯ: ಶಾಸಕ ಮಧು ಬಂಗಾರಪ್ಪ

Update: 2016-09-29 22:10 IST

  ಸೊರಬ, ಸೆ.29: ಕಾಂಗ್ರೆಸ್ ಶಾಸಕರ ಆಡಳಿತದಲ್ಲಿರುವ ತಾಲೂಕುಗಳನ್ನು ಬರಗಾಲ ಪೀಡಿತಪ್ರದೇಶ ಎಂದು ಘೋಷಣೆ ಮಾಡಿರುವ ರಾಜ್ಯ ಸರಕಾರದ ಕ್ರಮ ಖಂಡನೀಯ ಎಂದು ಶಾಸಕ ಮಧು ಬಂಗಾರಪ್ಪಆರೋಪಿಸಿದರು.

 ಗುರುವಾರ ಪಟ್ಟಣದ ಶಾಸಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯವೇ ಭೀಕರ ಬರಗಾಲದಿಂದ ನರಳುತ್ತಿದೆ. ಇದನ್ನರಿಯದ ರಾಜ್ಯ ಸರಕಾರ ಕೇವಲ 68 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿರುವುದಕ್ಕೆ ನಾಚಿಕೆಯಾಗಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ 30ರಷ್ಟು ಮಳೆ ಕೊರತೆ ಎದುರಿಸುತ್ತಿರುವ ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕುಗಳನ್ನು ಸರಕಾರ ಬರಪೀಡಿತ ಎಂದು ಘೋಷಿಸಿದೆ. ಆದರೆ ಶೇ. 46ರಷ್ಟು ಮಳೆ ಕೊರತೆ ಇರುವ ಸೊರಬ ಹಾಗೂ ಶಿಕಾರಿಪುರವನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸದಿರುವುದು ದುರಂತವಾಗಿದೆ ಎಂದರು.

ಸರಕಾರ ಆಡಳಿತ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಮಾತ್ರ ಬರಪೀಡಿತ ಪ್ರದೇಶಗಳೆಂದು ಘೋಷಿಸಿ ವಂಚಿಸುತ್ತಿದೆ. ಈ ತಾರತಮ್ಯ ನೀತಿಯು ಖಂಡನೀಯ ಎಂದ ಅವರು, ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೆ ರೈತ ಪರವಾದ ಯೋಜನೆಗಳನ್ನು ಸರಕಾರ ನೀಡಿಲ್ಲ ಎಂದು ದೂರಿದರು.

 ತಾಲೂಕಿನಲ್ಲಿ 1,500 ಕೆರೆಗಳಿದ್ದು, ಕೇವಲ ಹತ್ತಾರು ಕೆರೆಗಳಲ್ಲಿ ಮಾತ್ರ ಅಲ್ಪ-ಸ್ವಲ್ಪ ನೀರು ತುಂಬಿದೆ. ಉಳಿದ ಕೆರೆಗಳಲ್ಲಿ ಈಗಾಗಲೆ ನೀರು ಬತ್ತಿಹೋಗಿವೆ. ಇಲ್ಲಿನ ಬರದ ಸಮೀಕ್ಷೆಯನ್ನು ಸಂಬಂಧಿಸಿದ ಅಧಿಕಾರಿಗಳು ಸಕಾಲಕ್ಕೆ ನೀಡಿದ್ದರೂ ಸರಕಾರ ಪರಿಗಣಿಸದಿರುವುದು ಸರಿಯಲ್ಲ. ಕೂಡಲೇ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಾಲೂಕಿನ ಸ್ಥಳೀಯ ಅಧಿಕಾರಿಗಳು ವಿಮಾ ಕಂಪೆನಿಯೊಂದಿಗೆ ಶಾಮೀಲಾಗಿ ರೈತರ ಹಿತವನ್ನು ಕಡೆಗಣಿಸಿದ್ದಾರೆ. ರೈತರಿಗೆ ಕೃಷಿ ಪ್ರಶಸ್ತಿ ಕೊಡಿಸುವ ಆಮಿಷವೊಡ್ಡಿ ಉಪವಿಭಾಗಾಧಿಕಾರಿಯ ಮುಂದೆ ರೈತರೊಬ್ಬರಿಂದ ತಪ್ಪುಮಾಹಿತಿ ಕೊಡಿಸಿದ್ದಾರೆ. ಈ ಕಾರಣದಿಂದ ರೈತನಿಗೆ ನಿಜವಾಗಿ ದೊರೆಯಬೇಕಾಗಿದ್ದ ವಿಮಾ ಮೊತ್ತ ಪಾವತಿಯಾಗಿಲ್ಲ. ಸರಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ರೈತರಿಗೆ ಮೋಸ ಮಾಡುತ್ತಿರುವ ವಿಮಾ ಕಂಪೆನಿ ಮತ್ತು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸಿ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು. ಜಿಪಂನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್ ಕೊಟಗಿ, ಸೊರಬ ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಕೆ.ಪಿ. ರುದ್ರಗೌಡ, ತಾಪಂ ಸದಸ್ಯರಾದ ನಾಗರಾಜ್, ಸುನೀಲಗೌಡ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News