ತಾಳ್ಮೆಯಿಂದ ಪಕ್ಷನಿಷ್ಠೆ ಮೆರೆದರೆ ಅಧಿಕಾರ ಪ್ರಾಪ್ತಿ: ಟಿ.ಪಿ.ರಮೇಶ್ ಅಭಿಪ್ರಾಯ
ಮಡಿಕೇರಿ, ಸೆ.29: ಒಂದು ರಾಜಕೀಯ ಪಕ್ಷ ಎಲ್ಲರಿಗೂ ಎಲ್ಲ್ಲ ಸ್ಥಾನಮಾನಗಳನ್ನು ನೀಡಲು ಸಾಧ್ಯವಿಲ್ಲ. ತಾಳ್ಮೆಯಿಂದ ಪಕ್ಷ ಕಟ್ಟುವುದಕ್ಕೆ ದುಡಿದಾಗ ಮಾತ್ರ ಸ್ಥಾನಮಾನ ಹುಡುಕಿಕೊಂಡು ಬರುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ರಮೇಶ್ ಅಭಿಪ್ರಾಯಪಟ್ಟರು.
ಮಡಿಕೇರಿ ನಗರ ಕಾಂಗ್ರೆಸ್‌ನ ಸಭೆೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಸಭೆೆಯಲ್ಲಿ ಪಾಲ್ಗೊಂಡು ಮಾತನಾಡಿದ ಟಿ.ಪಿ. ರಮೇಶ್, ಕಾಂಗ್ರೆಸ್ ಪಕ್ಷಕ್ಕೆ ಮಡಿಕೇರಿ ನಗರದಲ್ಲಿ ಹೊಸ ಹುರುಪು ಬಂದಿದ್ದು, ಕಾರ್ಯಕರ್ತರು ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ಪಕ್ಷ ಕಟ್ಟುವ ಕೆಲಸ ಮಾಡಬೇಕೆಂದು ಕರೆ ನೀಡಿದರು. ಕಾರ್ಯಕರ್ತರು ತಾಳ್ಮೆಯಿಂದ ಪಕ್ಷಕ್ಕಾಗಿ ದುಡಿದಾಗ ಸ್ಥಾನಮಾನ ಹುಡುಕಿಕೊಂಡು ಬರುತ್ತದೆ ಎನ್ನುವುದಕ್ಕೆ ತಾವೇ ಉದಾಹರಣೆಯೆಂದ ರಮೇಶ್, ಕೊಡಗಿನಲ್ಲಿ ಕಾಂಗ್ರೆಸ್ ಪ್ರಬಲವಾಗಿ ಬೆಳೆಯುತ್ತಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು. ಅಬ್ದುಲ್ ರಝಾಕ್, ನಗರ ದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕೆಂದು ತಿಳಿಸಿದರು. ಮಡಿಕೇರಿ ನಗರ ದಸರಾ ಜನೋತ್ಸವಕ್ಕೆ ಮುಖ್ಯ ಮಂತ್ರಿಗಳು 75 ಲಕ್ಷ ರೂ. ಅನುದಾನ ಕಲ್ಪಿಸಲು ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಸೀತಾರಾಮ್, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ರಮೇಶ್ ಅವರಿಗೆ ಸಭೆ ಅಭಿನಂದನೆ ಸಲ್ಲಿಸಿತು. ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಅಯ್ಯಪ್ಪ, ನಗರಸಭಾ ಸದಸ್ಯರಾದ ಎಚ್.ಎಂ. ನಂದಕುಮಾರ್, ಝುಲೇಕಾಬಿ, ಪ್ರಕಾಶ್ ಆಚಾರ್ಯ, ಚುಮ್ಮಿ ದೇವಯ್ಯ, ಲೀಲಾ ಶೇಷಮ್ಮ, ವಿ.ಪಿ. ಸುರೇಶ್, ನಾಮ ನಿರ್ದೇಶಿತ ಸದಸ್ಯ ಉಸ್ಮಾನ್, ಅಲ್ಪಸಂಖ್ಯಾತರ ಘಟಕದ ಕೆ.ಇ. ಮ್ಯಾಥ್ಯು, ರೆಹಮಾನ್, ಮೊಣ್ಣಪ್ಪ, ಎಚ್.ಬಿ. ಚಂದ್ರು, ಯತೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.