ಕಡೂರು, ಬೀರೂರು ಮಧ್ಯೆ ಚತುಷ್ಪಥ ರಸ್ತೆ ವಿಸ್ತರಣೆಗೆ 50 ಕೋಟಿ ರೂ. ಮೀಸಲು: ಶಾಸಕ ದತ್ತ
ಕಡೂರು, ಸೆ.29: ಕಡೂರಿನಿಂದ ಬೀರೂರು ಪಟ್ಟಣದವರೆಗೆ ನಿರ್ಮಾಣವಾಗಲಿರುವ ಚತುಷ್ಪಥ ರಸ್ತೆ ವಿಸ್ತರಣೆ ಪ್ರಕ್ರಿಯೆ ಆರಂಭವಾಗಲಿದ್ದು, ಇದಕ್ಕಾಗಿ 50 ಕೋಟಿ ರೂ. ಮೀಸಲಿಡಲಾಗಿದೆ ಎಂದು ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ವೈ.ಎಸ್.ವಿ.ದತ್ತ ತಿಳಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಚತುಷ್ಪಥ ರಸೆಯಲ್ಲಿ ಪಾದಚಾರಿ ರಸ್ತೆ, ಎತ್ತಿನ ಗಾಡಿ, ಸರಕು ಸಾಕಣೆ ಸೇರಿ ಸೇವಾ ರಸ್ತೆಗಳು ಈ ಚತುಷ್ಪಥ ರಸ್ತೆಯಲ್ಲಿ ನಿರ್ಮಾಣವಾಗಲಿವೆ. ಶೀಘ್ರದಲ್ಲೇ ಕಡೂರು, ಬೀರೂರು ಪಟ್ಟಣಗಳಲ್ಲಿ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಎರಡೂ ಪಟ್ಟಣಗಳ ವರ್ತಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ರಾ. ಹೆದ್ದಾರಿ ವಿಭಾಗದ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಹೇಳಿದರು.
ಕಡೂರು ಪಟ್ಟಣದ ಹೊರ ವಲಯದಲ್ಲಿ ಹಾದು ಹೋಗುತ್ತಿರುವ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ದತ್ತ, ಈಗಾಗಲೇ ಮಾರ್ಗ ಗುರುತು ಮಾಡಿರುವಂತೆ ಕಡೂರು ಸಮೀಪದ ಗೆದ್ಲೆಹಳ್ಳಿಯಿಂದ ಆರಂಭವಾಗಿ ತಂಗಲಿ, ಮಲ್ಲೇಶ್ವರ, ತುರುವನಹಳ್ಳಿ, ಬೀರೂರು ಕಾವಲು, ಗಾಳಿಹಳ್ಳಿ, ಹನುಮೇನಹಳ್ಳಿ ಮೂಲಕ ಜೋಡಿ ತಿಮ್ಮಾಪುರದ ತನಕ ಬೈಪಾಸ್ ನಿರ್ಮಾಣವಾಗಲಿದೆ. ಇದಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ ಎಂದರು.
ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನಾಧಿಕಾರಿ ಮಹೇಶ್ ಬಾಬು ಆಕ್ಷೇಪಣೆ ಇದ್ದಲ್ಲಿ ಅರ್ಜಿ ಸಲ್ಲಿಸುವಂತೆ ಪ್ರಕಟನೆ ಹೊರಡಿಸಿದ್ದಾರೆ. ತಾವು ಕೂಡ ರೈತರನ್ನು ಕರೆದೊಯ್ದು ಸುಮಾರು 350ಕ್ಕೂ ಅಧಿಕ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದರಲ್ಲಿ ಸರಕಾರದ ಆದೇಶದಂತೆ ಅಭಿವೃದ್ಧಿ ಕಾರ್ಯದ ಸ್ವಾಧೀನಕ್ಕೆ ಒಳಗಾಗುವ ಜಾಗಕ್ಕೆ ಬೆಲೆ ಹೆಚ್ಚಳಕ್ಕಾಗಿ ಆಕ್ಷೇಪಣೆ ಸಲ್ಲಿಸಬಹುದೇ ವಿನಹ ಜಾಗ ಬಿಟ್ಟು ಕೊಡುವುದಿಲ್ಲವೆಂಬ ಕಾರಣಕ್ಕೆ ಅರ್ಜಿ ಸಲ್ಲಿಸಲು ಬರುವುದಿಲ್ಲ. ಇದರಿಂದ ಯಾವುದೇ ರೈತರು ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ. ಮುಂದಿನ ಭವಿಷ್ಯದ ದೃಷ್ಟಿಯಿಂದ ರಸ್ತೆ ಅಭಿವೃದ್ಧಿಯಾಗಬೇಕಾಗಿರುವ ಹಿನ್ನೆಲೆಯಲ್ಲಿ ರಸ್ತೆ ವಿಸ್ತರಣೆ ಕೈಗೊಳ್ಳಲಾಗುತ್ತಿದೆ ಎಂದು ದತ್ತ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಭಂಢಾರಿ ಶ್ರೀನಿವಾಸ್, ಸೀಗೇಹಡ್ಲು ಹರೀಶ್ ಜಿಗಣೇಹಳ್ಳಿ ನೀಲಕಂಠಪ್ಪ, ಪ್ರಸನ್ನ, ತಿಮ್ಮೇಗೌಡ ಮತ್ತಿತರರು ಉಪಸ್ಥಿತರಿದ್ದರು.