‘ದ್ವೇಷದ ರಾಜಕಾರಣಕ್ಕೆ ಭವಿಷ್ಯವಿಲ್ಲ: ಎ.ಕೆ.ಸುಬ್ಬಯ್ಯ
ಮಡಿಕೇರಿ, ಸೆ.29: ಇತ್ತೀಚಿನ ದಿನಗಳಲ್ಲಿ ಕೋಮು ಶಕ್ತಿಗಳು ದ್ವೇಷದ ರಾಜಕಾರಣ ಮಾಡುತ್ತಿದ್ದು, ಸಮಾಜದಲ್ಲಿ ಅಶಾಂತಿ ಮೂಡಿಸುವ ರಾಜಕಾರಣಕ್ಕೆ ಎಂದಿಗೂ ಭವಿಷ್ಯವಿಲ್ಲವೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಅಭಿಪ್ರಾಯಪಟ್ಟಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ‘ದ್ವೇಷ ರಾಜಕಾರಣ ನಿಲ್ಲಿಸಿ’ ಅಭಿಯಾನದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೋಮು ಶಕ್ತಿಗಳು ಸಮಾಜದ ಶಾಂತಿ ಸುವ್ಯವಸ್ಥೆಗೆ ತೊಡಕ್ಕುಂಟು ಮಾಡುತ್ತಿರುವುದಲ್ಲದೆ ರಾಜ್ಯಾಂಗ ವ್ಯವಸ್ಥೆಯ ನಾಶಕ್ಕೂ ಹವಣಿಸುತ್ತಿವೆ ಎಂದು ಆರೋಪಿಸಿದರು.
ರಾಜ್ಯಾಂಗ ವ್ಯವಸ್ಥೆಯನ್ನು ಒಪ್ಪದ ಸಮಾಜ ಘಾತುಕರು ಜನರ ಭಾವನೆಗಳನ್ನು ಕೆಣಕುವ ಮೂಲಕ ಅಶಾಂತಿ ಮತ್ತು ಅರಾಜಕತೆಗೆ ನಾಂದಿ ಹಾಡುತ್ತಿದ್ದಾರೆ. ಸಮಾಜದಲ್ಲಿ ಸುಳ್ಳನ್ನು ಸತ್ಯ ಮಾಡುವವರೇ ನಿಜವಾದ ದೇಶದ್ರೋಹಿಗಳಾಗಿದ್ದಾರೆ ಎಂದು ಆರೋಪಿಸಿದ ಎ.ಕೆ.ಸುಬ್ಬಯ್ಯ ಇಂತಹ ಕೋಮುವಾದಿಗಳ ವಿರುದ್ಧ ಜನರು ಜಾಗೃತರಾಗಬೇಕೆಂದು ಕರೆ ನೀಡಿದರು.
ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ದಲಿತರು, ಅಲ್ಪಸಂಖ್ಯಾತರು, ರೈತರ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದರು.
ದೇಶದ ವಿವಿಧೆಡೆಗಳಲ್ಲಿ ಜಾತಿ, ಜನಾಂಗದ ಹೆಸರಿನಲ್ಲಿ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ. ಈ ಬಗ್ಗೆ ಜನಜಾಗೃತಿ ಮೂಡಿಸಲು ಸೆ. 1ರಿಂದ 30ರವರೆಗೆ ಕನ್ಯಾಕುಮಾರಿಯಿಂದ ದಿಲ್ಲಿಯವರೆಗೆ ಪಿಎಫ್‌ಐ ವತಿಯಿಂದ ಜನ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಅಬೂಬಕ್ಕರ್ ಮಾತನಾಡಿ, ದೇಶದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರಕಾರ ಕೇವಲ ಒಂದು ಜನಾಂಗಕ್ಕೆ ಸೀಮೀತವಾದಂತೆ ನಡೆದುಕೊಳ್ಳುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಕೆ.ಎಂ. ಇಬ್ರಾಹೀಂ ಮಾತನಾಡಿ, ಧರ್ಮ ಪರಿಪಾಲನೆಯೊಂದಿಗೆ ಪ್ರತಿಯೊಂದು ಧರ್ಮ ಸಾರುವ ಶಾಂತಿ ಸೌಹಾರ್ದವನ್ನು ಪ್ರತಿಯೊಬ್ಬರು ಅನುಸರಿಸಬೇಕೆಂದರು. ಈ ಸಂದರ್ಭದಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ಮಜೀದ್, ನಗರಾಧ್ಯಕ್ಷ ಕೆ.ಜೆ. ಪೀಟರ್, ದಲಿತ ಮುಖಂಡ ಡಿ.ಎಸ್. ನಿರ್ವಾಣಪ್ಪ, ವೈದ್ಯರಾದ ಡಾ. ಸಿದ್ದಲಿಂಗ, ನಗರಸಭಾ ಸದಸ್ಯ ಮನ್ಸೂರ್ ಅಲಿ ಮತ್ತಿತರರು ಉಪಸ್ಥಿತರಿದ್ದರು.