ವಿಕಲಚೇತನರಿಗೆ ಕಾನೂನು ನೆರವು
Update: 2016-09-29 22:21 IST
ತರೀಕೆರೆ, ಸೆ.29: ಪಟ್ಟಣದ ಕನಕ ಕಲಾ ಭವನದಲ್ಲಿ ಗುರುವಾರ ಪುರಸಭೆ ವತಿಯಿಂದ ವಿಕಲಚೇತನರಿಗೆ ಉಚಿತ ಕಾನೂನು ಅರಿವು ಜಾಗೃತ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷೆ ಜ್ಯೋತಿ, ವಿಕಲ ಚೇತನರು ಅಂಜಿಕೆ ಬಿಟ್ಟು ಸರಕಾರಿ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಆರೋಗ್ಯ ಕಾಪಾಡಿಕೊಳ್ಳಲು ಶ್ರಮಿಸಬೇಕು ಎಂದರು.
ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮಾ ಮಾತನಾಡಿ, ಪುರಸಭೆಯಿಂದ ಪೋಷಕ ಭತ್ಯೆ ನೀಡಲಾಗಿದೆ. 9 ಜನರಿಗೆ ದ್ವಿಚಕ್ರ ವಾಹನ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕರ್ತ ಅಕ್ರಂ ಪಾಷ ಮಾತನಾಡಿ, ತಾಲೂಕಿನಲ್ಲಿ 3,763 ಅಂಗವಿಕಲರಿದ್ದು ಕೆಲವರಿಗೆ ಮಾತ್ರ ಸೌಲಭ್ಯ ಸಿಕ್ಕಿದ್ದು, ಉಳಿದವರು ಕೂಡಲೆ ಗುರುತಿನ ಪತ್ರ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಗಿರೀಶ್, ವಕೀಲರಾದ ಮಮತಾ, ಸುರೇಶ್‌ಚಂದ್ರ, ತೇಜಮೂರ್ತಿ, ಆರೋಗ್ಯ ನಿರೀಕ್ಷಕ ಮಹೇಶ್, ಕಾರ್ಯಕರ್ತ ನಾಗರಾಜುಮತ್ತಿತರರು ಉಪಸ್ಥಿತರಿದ್ದರು.