ವಂಚನೆ: ಒಬ್ಬನ ಸೆರೆ, ಮೂವರು ನಾಪತ್ತೆ
ಶಿವಮೊಗ್ಗ, ಸೆ. 29: ನಕಲಿ ಬಂಗಾರ ನೀಡಿ ಬೆಂಗಳೂರು ಮೂಲದ ವ್ಯಕ್ತಿಗೆ ಲಕ್ಷಾಂತರ ರೂ. ವಂಚಿಸಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸುವಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಪತ್ತೆಯಾಗಿರುವ ಇತರ ಆರೋಪಿಗಳ ಬಂಧನಕ್ಕೆ ಕಾರ್ಯಾ ಚರಣೆ ಮುಂದುವರಿಸಿದ್ದಾರೆ. ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದ ನಿವಾಸಿ ಶ್ರೀನಿವಾಸ್ ಯಾನೆ ಅಜ್ಜಪ್ಪ (50) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ 1.10 ಲಕ್ಷ ರೂ. ನಗದು, ಲಗೇಜ್ ಆಟೊ ವಾಹನ, ಬೈಕ್‌ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ಹಿನ್ನೆಲೆ: ಇತ್ತೀಚೆಗೆ ಬೆಂಗಳೂರಿನ ನೆಲಮಂಗಲದ ಮಾರನಾಯಕನಹಳ್ಳಿಯ ನಿವಾಸಿಯಾದ ಗಾರ್ಮೆಂಟ್ ಉದ್ಯೋಗಿ ಸೋಮೇ ಗೌಡ (42) ಎಂಬವರ ಮೊಬೈಲ್‌ಗೆ ವಂಚಕನೋರ್ವ ಕರೆ ಮಾಡಿ ಪರಿಚಯ ಮಾಡಿಕೊಂಡಿದ್ದ. ಹೊಲದಲ್ಲಿ ಉಳುಮೆ ಮಾಡುವಾಗ ಬಂಗಾರದ ನಾಣ್ಯಗಳು ದೊರಕಿವೆ. ಾನು ಬಡವನಾಗಿದ್ದೇನೆ. ಮಗಳ ಮದುವೆ ಮಾಡಬೇಕಾಗಿದ್ದು, ಈ ಉದ್ದೇಶಕ್ಕೆ ಬಂಗಾರದ ನಾಣ್ಯಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದೇನೆ ಎಂದು ಸೋಮೇಗೌಡಗೆ ವಂಚಕ ತಿಳಿಸಿದ್ದ.
ವಂಚಕನ ಮಾತು ನಂಬಿದ ಸೋಮೇಗೌಡರು ಹಣದ ಸಮೇತ ಶಿವಮೊಗ್ಗ ತಾಲೂಕಿನ ಮಡಕೆಚೀಲೂರು ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಸುಮಾರು ನಾಲ್ವರು ಆರೋಪಿಗಳು ಸೋಮೇಗೌಡರಿಗೆ ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ಅವರಿಂದ 2.50 ಲಕ್ಷ ರೂ. ಪಡೆದು ಪರಾರಿಯಾಗಿದ್ದರು. ತಪಾಸಣೆಯಲ್ಲಿ ನಕಲಿ ಬಂಗಾರ ಎನ್ನುವುದು ಪತ್ತೆಯಾದ ಹಿನ್ನೆಲೆಯಲ್ಲಿ ಸೋಮೇಗೌಡರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿಗಳ ಪತ್ತೆಗೆ ಪೊಲೀಸ್ ತಂಡವನ್ನು ರಚಿಸಿಲಾಗಿತ್ತು.
ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ಆರೋಪಿಗಳ ಸುಳಿವು ಪತ್ತೆ ಹಚ್ಚಿ, ಓರ್ವ ಆರೋಪಿಯನ್ನು ಬಂಧಿಸುವಲ್ಲಿ ತಂಡವು ಯಶಸ್ವಿಯಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿದೆ.