×
Ad

ಸ್ವ-ಸಹಾಯ ಗುಂಪುಗಳ ಮಾಹಿತಿ ಕಾರ್ಯಾಗಾರ

Update: 2016-09-30 22:14 IST

ಕುಶಾಲನಗರ, ಸೆ.30: ಐಎನ್‌ಟಿಯುಸಿ ಹಾಗೂ ಸಹಭಾಗಿತ್ವದ ಸಂಸ್ಥೆಯಾದ ಡಿಐಎಸ್‌ಸಿ(ಡಿಸ್ಕ್), ಕೂಡಿಗೆ ಕಾರ್ಪೊರೇಶನ್ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆ(ಕಾಬ್ಸೆಟ್) ಇವುಗಳ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಕಾರ್ಮಿಕ ಮಹಿಳಾ ಮತ್ತು ಪುರುಷರ ಸ್ವ-ಸಹಾಯ ಗುಂಪುಗಳಿಗೆ ಮಾಹಿತಿ ಕಾರ್ಯಗಾರವು ಕೂಡಿಗೆಯ ಕಾರ್ಪೊರೇಶನ್ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಐಎನ್‌ಟಿಯುಸಿ ಉಪಾಧ್ಯಕ್ಷ ನಾಪಂಡ ಮುತ್ತಪ್ಪನೆರವೇರಿಸಿ ಬಳಿಕ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಕಾರ್ಮಿಕ ಸಂಘಟನೆಯ ಮೂಲಕ 1,600 ಸ್ವ-ಸಹಾಯ ಸಂಘಗಳು ರಚನೆಯಾಗಿದ್ದು, 800 ಸಂಘಗಳು ಕಾರ್ಯಚಟುವಟಿಕೆಯಲ್ಲಿ ಮುನ್ನುಗ್ಗುತ್ತಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕ್ರಮಗಳಲ್ಲಿ ನಿರತವಾಗಿವೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಬ್ಸೆಟ್ ಸಂಸ್ಥೆಯ ನಿರ್ದೇಶಕ ನಾಗೇಂದ್ರ ಮಾತನಾಡಿ, 1982 ರಲ್ಲಿ ಸ್ಥಾಪನೆಗೊಂಡ ತರಬೇತಿ ಸಂಸ್ಥೆಗಳು ದೇಶದಲ್ಲಿ 553 ಸಂಸ್ಥೆಗಳನ್ನು ಹೊಂದಿದ್ದು, ರಾಜ್ಯದಲ್ಲಿ 27 ಕಡೆಗಳಲ್ಲಿ ಸ್ವಸಹಾಯ ಗುಂಪುಗಳ ಆರ್ಥಿಕ ಚಟುವಟಿಕೆ, ಬಲವರ್ಧನೆ, ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮವಾದ ಬದುಕು ಸಾಗಿಸಲು, ಸ್ವಾಭಿಮಾನದ ಜೀವನ ರೂಪಿಸಿಕೊಳ್ಳಲು ಬೇಕಾಗುವಂತಹ ಮಾರ್ಗದರ್ಶನವನ್ನು ಈ ಸಂಸ್ಥೆಯ ಮೂಲಕ ನೀಡಲಾಗುವುದು. ಇದರ ಪ್ರಯೋಜನವನ್ನು ಪ್ರತಿಯೊಬ್ಬರು ಬಳಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಐಎನ್‌ಟಿಯುಸಿ ಅಧ್ಯಕ್ಷ ಟಿ.ಪಿ. ಹಮೀದ್ ಮಾತನಾಡಿದರು.

ವೇದಿಕೆಯಲ್ಲಿ ಕೊಡಗು ಜಿಲ್ಲಾ ಐಎನ್‌ಟಿಯುಸಿ ಪ್ರಧಾನ ಕಾರ್ಯದರ್ಶಿ ಧರ್ಮಪ್ಪ, ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಉಪಸ್ಥಿತರಿದ್ದರು. ತರಬೇತಿಯಲ್ಲಿ 200ಕ್ಕೂ ಅಧಿಕ ಸ್ವ-ಸಹಾಯ ಗುಂಪಿನ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಗೋವಿಂದರಾಜ್ ಸ್ವಾಗತಿಸಿ, ಪಾರ್ವತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News