ಭೂ ಮಂಜೂರಾತಿಗೆ ಒತ್ತಾಯಿಸಿ ಮನವಿ
ಸಾಗರ, ಸೆ.30: ವಿವಿಧ ಭೂ ಮಂಜೂರಾತಿ ಯೋಜನೆಯಡಿ ಅರ್ಜಿ ಸಲ್ಲಿಸಿರುವ ತಾಲೂಕಿನ ದಲಿತ ಸಮುದಾಯಗಳಿಗೆ ಭೂ ಮಂಜೂರಾತಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪಬಣ) ವತಿಯಿಂದ ಗುರುವಾರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಬಗರ್‌ಹುಕುಂ ಕಾಯ್ದೆಯಡಿ ಭೂ ಮಂಜೂರಾತಿ ಕೋರಿ ನಂ.50 ಮತ್ತು 53ರಲ್ಲಿ ಅರ್ಜಿ ಸಲ್ಲಿಸಿದ ಎಲ್ಲ ಫಲಾನುಭವಿಗಳಿಗೆ ಶೀಘ್ರ ಭೂ ಮಂಜೂರಾತಿ ಮಾಡಿಕೊಡಬೇಕು. ಅರಣ್ಯಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ ಎಲ್ಲ ಫಲಾನುಭವಿಗಳಿಗೆ ಕೂಡಲೇ ಭೂ ಮಂಜೂರಾತಿ ನೀಡಿ ಹಕ್ಕುಪತ್ರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಬಿಪಿಎಲ್ ಪಡಿತರಚೀಟಿಯನ್ನು ಹೊಂದಿರುವ ಎಲ್ಲರಿಗೂ ಪ್ರತಿ ತಿಂಗಳು 30ಕೆಜಿ ಅಕ್ಕಿ, ಆಹಾರ ಧಾನ್ಯ ನೀಡಬೇಕು. ಈಗಿನ ಟೋಕನ್ ವ್ಯವಸ್ಥೆಯನ್ನು ರದ್ದುಪಡಿಸಬೇಕು. ತಾಲೂಕಿನ ಕಸಬಾ ಹೋಬಳಿಯ ಜಂಬಗಾರು ಸ.ನಂ.6 ಮತ್ತು 8ರಲ್ಲಿ ನಿವೇಶನ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ ಎಲ್ಲ ಫಲಾನುಭವಿಗಳಿಗೂ ವಿಶೇಷ ಕಾಯ್ದೆಯಡಿ ನಿವೇಶನ ಮಂಜೂರು ಮಾಡಿ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಹಂದಿಗೋಡು ರೋಗಪೀಡಿತ ಎಲ್ಲ ರೋಗಿಗಳಿಗೆ ಅವಶ್ಯವಿರುವ ಎಲ್ಲ ಸೌಲಭ್ಯಗಳನ್ನು ಮಂಜೂರಾತಿ ಮಾಡುವುದು, ನಗರ ವ್ಯಾಪ್ತಿಯಲ್ಲಿ ಒಳಚರಂಡಿ ಅವ್ಯವಸ್ಥೆಯಿಂದ ರಸ್ತೆಗಳು ಹಾಳಾಗಿದ್ದು, ಕೂಡಲೇ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರು ಮತ್ತು ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿತು. ಈ ಸಂದರ್ಭದಲ್ಲಿ ರಾಜ್ಯ ವಿಭಾಗೀಯ ಸಂಚಾಲಕ ರಾಜೇಂದ್ರ ಬಂದಗದ್ದೆ, ತಾಲೂಕು ಸಂಚಾಲಕ ಲಕ್ಷ್ಮಣ ಸಾಗರ್, ಜಿಲ್ಲಾ ಮುಖಂಡ ದೇವೇಂದ್ರಪ್ಪ, ಸಂಘಟನಾ ಸಂಚಾಲಕ ಮಹಾದೇವಪ್ಪ.ಟಿ., ನಾಗಪ್ಪ ಹುರಳಿ, ವೆಂಕಪ್ಪ, ಧರ್ಮರಾಜ್, ವಿನಾಯಕ್, ಸೋಮರಾಜ ಬೆಳಲಮಕ್ಕಿ, ಮಂಜುನಾಥ್, ಗುತ್ಯಪ್ಪ, ಅಣ್ಣಪ್ಪ, ಈಶ್ವರ ಮಂಡಗಳಲೆ ಮತ್ತಿತರರು ಉಪಸ್ಥಿತರಿದ್ದರು.