ಲೈಂಗಿಕ ಕಾರ್ಯಕರ್ತೆಯರು ಮುಖ್ಯವಾಹಿನಿಗೆ ಬರಲಿ
ಕಾರವಾರ, ಸೆ.30: ರಾಜ್ಯದ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ನಡೆಸಲು ಸಮಿತಿ ರಚಿಸಲಾಗಿದೆ ಎಂದು ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿಯ ಅಧ್ಯಕ್ಷೆ ಡಾ. ಜಯಮಾಲಾ ಹೇಳಿದರು.
ಅವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಂವಾದ ಹಾಗೂ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಸಮಿತಿಯಲ್ಲಿ 21 ಜನ ಸದಸ್ಯರಿದ್ದಾರೆ. ಸಮಿತಿಯಲ್ಲಿ ಕೆ.ವಿ. ಸ್ಟ್ಯಾನ್ಲಿ, ಬಿ.ಎಲ್. ಪಾಟೀಲ್, ರೂಪಾ ಹಾಸನ, ಶಿಲ್ಪಾಶೆಟ್ಟಿ, ಮೀನಾಕ್ಷಿ ಬಾಳಿ ಹಾಗೂ ಇನ್ನಿತರರು ಸಮಿತಿಯಲ್ಲಿದ್ದು ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ವರದಿಗಳನ್ನು ಸಂಗ್ರಹಿಸುತ್ತಿದ್ದಾರೆ.
ರಾಜ್ಯದ 30 ಜಿಲ್ಲೆಗಳಲ್ಲೂ ಈಗಾಗಲೇ ಸಭೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆ ಕೊನೆಯದಾಗಿದು,್ದ ಉಳಿದ 176 ತಾಲೂಕುಗಳಲ್ಲಿ ತಮ್ಮ ಪ್ರಶ್ನಾವಳಿಗಳ ಮೂಲಕ ತಲುಪುತ್ತಿದ್ದೇವೆ ಎಂದ ಅವರು ಸರಕಾರಕ್ಕೆ ಫೆಬ್ರವರಿಯಲ್ಲಿ ವರದಿ ಸಲ್ಲಿಸಲಾಗುವುದು. ದಮನಿತ ಮಹಿಳೆಯ ಸ್ಥಿತಿಗೆ ಯಾರು ಕಾರಣ? ಏಕೆ ಹೀಗಾಗಿದೆ? ಮಕ್ಕಳ ಸ್ಥಿತಿಗೆ ಹೇಗಿದೆ? ಆರ್ಥಿಕ, ಕೌಟುಂಬಿಕ ವಿಷಯ ಒಳಗೊಂಡು ವಿವಿಧ ವಿವರಗಳನ್ನು ಪಡೆಯಲಾಗುವುದು ಎಂದರು.
ಕೌಟುಂಬಿಕ, ಹೆಣ್ಣು ಭ್ರೂಣ ಹತ್ಯೆ, ಅತ್ಯಾಚಾರ ಒಳಗೊಂಡ ಹಲವಾರು ದೌರ್ಜನ್ಯಗಳಿಗೆ ಮಹಿಳೆ ಒಳಗಾಗುತ್ತಿದ್ದಾಳೆ. ಇವೆಲ್ಲವನ್ನು ತಪ್ಪಿಸಲು ಸಮಿತಿ ಶಿಫಾರಸು ಮಾಡಲಿದೆ. ಸಮಿತಿಯ ವರದಿ ಆಧರಿಸಿ ಲೈಂಗಿಕ ಕಾರ್ಯಕರ್ತೆಯರ ಅಭಿವೃದ್ಧ್ದಿಗಾಗಿ ಸರಕಾರ ಯೋಜನೆಗಳನ್ನು ಜಾರಿ ತರಲಿದೆ. ಲೈಂಗಿಕ ಕಾರ್ಯಕರ್ತೆಯರ ಸಮಾಜದ ಮುಖ್ಯವಾಹಿನಿಗೆ ತರಬೇಕು ಎನ್ನುವುದು ಸರಕಾರದ ಉದ್ದೇಶವಾಗಿದ್ದು ಇದು ದೇಶದಲ್ಲೇ ಮೊದಲ ಪ್ರಯತ್ನವಾಗಿದೆ ಎಂದರು.