×
Ad

ಉರ್ದು ಭಾಷೆಯು ಬದುಕು, ಸಂಸ್ಕೃತಿಯ ಮುಖವಾಣಿ: ಅಝೀಝುಲ್ಲಾಬೇಗ್

Update: 2016-09-30 22:20 IST

ಚಿಕ್ಕಮಗಳೂರು, ಸೆ.30: ಉರ್ದು ಒಂದು ಭಾಷೆಗಿಂತಲೂ ಮಿಗಿಲಾಗಿ ವಿಶಿಷ್ಟ ಬಗೆಯ ಬದುಕಿನ ಹಾಗೂ ಸಂಸ್ಕೃತಿಯ ಮುಖವಾಣಿ ಆಗಿದೆ. ಉರ್ದು ಪತ್ರಿಕೋದ್ಯಮ ಉತ್ತರ ಭಾರತದಲ್ಲಿ ಹೆಚ್ಚಾಗಿ ವ್ಯಾಪಿಸಿದ್ದು, ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲೂ ನಾಲ್ಕೈದು ಉರ್ದು ಪತ್ರಿಕೆಗಳು ಉತ್ತಮವಾಗಿ ಬರುತ್ತಿವೆ ಎಂದು ಕರ್ನಾಟಕ ಉರ್ದು ಅಕಾಡಮಿ ಅಧ್ಯಕ್ಷ ವಿಶ್ರಾಂತ ಐಎಎಸ್‌ಅಧಿಕಾರಿ ಅಝೀಝುಲ್ಲಾಬೇಗ್ ಅಭಿಪ್ರಾಯಿಸಿದರು.

 ಅವರು ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಸುವರ್ಣ ಮಾಧ್ಯಮ ಭವನದ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಸನ್ಮಾನ ಸ್ವೀಕರಿಸಿ ಆಸಕ್ತರೊಂದಿಗೆ ಉರ್ದು ಬರವಣಿಗೆ ಪ್ರಸ್ತುತತೆ ಕುರಿತಂತೆ ಸಂವಾದಿಸಿದರು. ಉರ್ದುಭಾಷೆಗೆ ಚಾರಿತ್ರಿಕ ಇತಿಹಾಸವಿದೆ. ಉರ್ದು ಭಾಷೆಯಲ್ಲಿ ಕಂಡುಬರುವ ಮಾಧುರ್ಯ, ಅಭಿವ್ಯಕ್ತಿ ಸಾಮರ್ಥ್ಯ, ಸೂಕ್ಷ್ಮತೆಗಳು ಅಚ್ಚರಿ ಹುಟ್ಟಿಸುವಂತಿದೆ. ಉರ್ದು ಪದಕೋಶದ ಆಳ ಮತ್ತು ವ್ಯಾಪ್ತಿ, ಉರ್ದು ಬಳಕೆಯ ಹಾಸುಬೀಸುಗಳು ಓದುಗರನ್ನು-ಕೇಳುಗರನ್ನು ಮೂಕವಿಸ್ಮಿತಗೊಳಿಸುತ್ತದೆ. ಉರ್ದು ಗದ್ಯ ಶೈಲಿ, ಕಾವ್ಯ ಶೈಲಿ, ವಿಶಿಷ್ಟ ಸಾಹಿತ್ಯ ಪ್ರಕಾರಗಳು ಕುತೂಹಲಕಾರಿಯಾಗಿ ಕಂಡುಬರುತ್ತದೆ ಎಂದು ಅವರು ವಿವರಿಸಿದರು.

ಭಾರತೀಯ ಭಾಷಾ ಪರಿಸರದಲ್ಲಿ ಒಂದಕ್ಕಿಂತ ಒಂದು ಸತ್ವಯುತ ಎನಿಸಿರುವ ಹಲವಾರು ಭಾಷೆಗಳು ಮೈದುಂಬಿ ಬೆಳೆದು ನಿಂತಿದೆ. ಕೆಲವು ಭಾಷೆಗಳು ಐತಿಹಾಸಿಕವಾಗಿ ಶತಶತಮಾನಗಳಷ್ಟು ಹಿಂದಕ್ಕೆ ಹೋದರೆ ಇನ್ನೂ ಕೆಲವು ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿಂದ ಹಿರಿಮೆ ಮೆರೆಯುತ್ತಿವೆೆ. ಭಾಷೆಗಳು ಹಲವಾದರೂ ಭಾರತೀಯ ಸಾಹಿತ್ಯ ಒಂದೇ ಎಂಬುದನ್ನು ನೆನಪಿಡಬೇಕು. ಭಾಷಾ ಸಾಹಿತ್ಯಗಳ ನಡುವೆ ಕೊಡು-ಕೊಳ್ಳುವಿಕೆ ಒಂದು ನಿರಂತರ ಚಟುವಟಿಕೆಯಾಗಿ ವೈವಿಧ್ಯಮಯಗೊಳಿಸಿ ಅರಿವಿನ ಕಣಜವನ್ನು ಶ್ರೀಮಂತಗೊಳಿಸುತ್ತಿವೆ ಎಂದರು. ಉರ್ದು ಅಕಾಡಮಿ ವತಿಯಿಂದ ವಾರ್ಷಿಕ ಪ್ರಶಸ್ತಿ ನೀಡುವಾಗ ಉರ್ದು ಪತ್ರಿಕೋದ್ಯಮದ ಸೇವೆಯನ್ನು ಪರಿಗಣಿಸಿ ಓರ್ವರಿಗೆ ಪ್ರಶಸ್ತಿ ನೀಡುವ ಪರಿಪಾಠ ಹಮ್ಮಿಕೊಳ್ಳಲಾಗಿದೆ. ಎರಡು ವರ್ಷಗಳ ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ವಿತರಣಾ ಸಮಾರಂಭದ ದಿನಾಂಕ ಪ್ರಕಟಿಸಲಾಗುವುದು. ಎರಡು ದಿನಗಳ ಉರ್ದು ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ ಅಂತ್ಯದ ವೇಳೆ ನಡೆಸಲು ನಿರ್ಧರಿಸಲಾಗಿದೆ ಎಂದರು. ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರಭುಗಶಾಸ್ತ್ರಿ ಮಾತನಾಡಿ, ಉರ್ದು ಶ್ರೀಮಂತ ಭಾಷೆ, ಮಾಜಿ ಪ್ರಧಾನಿ ಅಟಲ್‌ಜೀ ಸೇರಿದಂತೆ ಹಲವು ಮುಖಂಡರು ಉರ್ದುವಿನಲ್ಲಿ ಕಾವ್ಯ ರಚಿಸಿದ್ದಾರೆ. ಭಾಷೆ ಜನಾಂಗ ಅಥವಾ ಧರ್ಮಕ್ಕೆ ಸೀಮಿತವಲ್ಲ. ಇದೊಂದು ಸಂವಹನದ ಸಾಧನ. ಉರ್ದು ಪತ್ರಿಕೋದ್ಯಮವು ಕರ್ನಾಟಕದಲ್ಲಿ ಸಶಕ್ತಗೊಂಡು ಭಾವೈಕ್ಯಕ್ಕೆ ಪೂರಕವಾಗಿ ಭಾಷಿಗರನ್ನು ಅಣಿಗೊಳಿಸಬೇಕು ಎಂದರು. ಪತ್ರಕರ್ತ ಶರೀಫ್, ಕವಿ ಎಂ.ಬಿ.ಘನಿ, ಶಾಯಿಬ್ ಅಲಿ, ಅಶ್ಫಾಕ್ ಅಹ್ಮದ್, ನಿವೃತ್ತ ಡಿಡಿಪಿಐ ರೆಹಮತುನ್ನೀಸಾ ಮತ್ತಿತರಿದ್ದರು. ಅಕ್ಮಲ್ ಕಿತಾಬ್ ಘರ್ ಕಾರ್ಯದರ್ಶಿ ಕೆ.ಮುಹಮ್ಮದ್‌ಜಾಫರ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News