ಬರಪೀಡಿತ ತಾಲೂಕುಗಳ ಘೋಷಣೆಯಲ್ಲಿ ರಾಜಕೀಯ: ಆರೋಪ
<ಬಿ. ರೇಣುಕೇಶ್
ಶಿವಮೊಗ್ಗ, ಸೆ. 30: ಕಂದಾಯ ಇಲಾಖೆ ಇತ್ತೀಚೆಗೆ ಅಧಿಕೃತವಾಗಿ 68 ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸಿದೆ. ಇದರಲ್ಲಿ ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪ ಅವರ ತವರೂರು ಶಿವಮೊಗ್ಗ ಜಿಲ್ಲೆಯ ಮಲೆನಾಡು ಪ್ರದೇಶಗಳಾದ ಸಾಗರ, ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕುಗಳು ಸ್ಥಾನ ಪಡೆದುಕೊಂಡಿವೆ. ಈ ನಡುವೆ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾದ ಜಿಲ್ಲೆಯ ಇತರ ನಾಲ್ಕು ತಾಲೂಕುಗಳಿಂದ ಅಪಸ್ವರದ ಧ್ವನಿ ಕೇಳಿ ಬರತೊಡಗಿದ್ದು, ಬರಪೀಡಿತ ಪ್ರದೇಶಗಳನ್ನು ಘೋಷಿಸುವಲ್ಲಿಯೂ ರಾಜಕೀಯ ಮಾಡಲಾಗಿದೆ ಎಂಬ ಆರೋಪಗಳು ಸುಳಿದಾಡುತ್ತಿವೆ.
ಪ್ರಸ್ತುತ ಮುಂಗಾರಿನಲ್ಲಿ ಜಿಲ್ಲೆಯಾದ್ಯಂತ ಮಳೆಯ ತೀವ್ರ ಕೊರತೆ ಉಂಟಾಗಿದೆ. ಎಲ್ಲ ತಾಲೂಕುಗಳಲ್ಲಿಯೂ ವಾಡಿಕೆಯ ಮಳೆಯಾಗಿಲ್ಲ. ಪ್ರಮುಖ ಜಲಾಶಯ, ಕೆರೆಕಟ್ಟೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಇದರಿಂದ ಕೃಷಿ ಚಟುವಟಿಕೆಯ ಮೇಲೆ ಗಂಭೀರ ಪರಿಣಾಮ ಉಂಟು ಮಾಡಿದೆ. ಎಲ್ಲ ತಾಲೂಕುಗಳಲ್ಲಿಯೂ ಬರಗಾಲದ ಕರಿಛಾಯೆ ಆವರಿಸಿದೆ.
ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ನಡೆದ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಜಿಲ್ಲೆಯ ಎಲ್ಲ ಏಳು ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸುವ ಸರ್ವಾನುಮತದ ನಿರ್ಣಯ ಅಂಗೀಕರಿಸಿ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿತ್ತು. ಕಂದಾಯ ಇಲಾಖೆಯ ಸಚಿವ ಕಾಗೋಡು ತಿಮ್ಮಪ್ಪಅವರು ಜಿಲ್ಲೆಯವರೇ ಆಗಿದ್ದರಿಂದ ಹಾಗೂ ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಅವರಿಗೆ ಮಾಹಿತಿ ಇರುವುದರಿಂದ ಇಡೀ ಜಿಲ್ಲೆಯನ್ನೇ ಬರ ಪೀಡಿತವೆಂದು ಘೋಷಿಸುವ ನಿರೀಕ್ಷೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ನಾಗರಿಕರಲ್ಲಿತ್ತು.
ಆಕ್ರೋಶ: ಬರ ಪೀಡಿತ ಪಟ್ಟಿಯಲ್ಲಿ ಸ್ಥಾನ ಪಡೆಯದ ನಾಲ್ಕು ತಾಲೂಕುಗಳ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಇದೀಗ ಅಸಮಾಧಾನ ಮನೆ ಮಾಡಿದೆ. ಈ ತಾಲೂಕುಗಳಲ್ಲಿನ ಕಾಂಗ್ರೆಸ್ ಪಕ್ಷದ ಕೆಲ ಸ್ಥಳೀಯ ಜನಪ್ರತಿನಿಧಿಗಳು ತಮ್ಮ ತಾಲೂಕುಗಳು ಬರ ಪೀಡಿತ ಪಟ್ಟಿಯಲ್ಲಿ ಸ್ಥಾನ ಪಡೆಯದಿರುವುದಕ್ಕೆ ಪರೋಕ್ಷ ಬೇಸರ ವ್ಯಕ್ತಪಡಿಸುತ್ತಿದ್ದು, ಸಚಿವ ಕಾಗೋಡು ತಿಮ್ಮಪ್ಪಅವರನ್ನು ಭೇಟಿಯಾಗಿ ಚರ್ಚೆ ನಡೆಸಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಇದೇ ವಿಷಯ ಮುಂದಿಟ್ಟುಕೊಂಡು ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಸುವ ಚಿಂತನೆ ನಡೆಸುತ್ತಿರುವ ಮಾಹಿತಿಗಳೂ ಕೇಳಿ ಬರುತ್ತಿವೆ. ಈಗಾಗಲೇ ಸೊರಬ ಶಾಸಕ ಮಧು ಬಂಗಾರಪ್ಪಅವರು ಸೊರಬ ತಾಲೂಕನ್ನು ಕೈಬಿಟ್ಟಿರುವ ಸರಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಹರಿಹಾಯ್ದಿದ್ದಾರೆ.
ಬರ ಪೀಡಿತವೆಂದು ಘೋಷಿಸಿರುವ ತಾಲೂಕುಗಳಿಗಿಮತಲು ಸೊರಬ, ಶಿಕಾರಿಪುರ, ಭದ್ರಾವತಿ ಹಾಗೂ ಶಿವಮೊಗ್ಗ ಗಳಲ್ಲಿ ಆಗಿಲ್ಲ. ಹೀಗಿರುವಾಗ ಈ ತಾಲೂಕುಗಳನ್ನು ಬರ ಪೀಡಿತ ಎಂದು ಸರಕಾರ ಘೋಷಿಸಬೇಕಾಗಿತ್ತು. ಆದರೆ, ಮೊದಲ ಪಟ್ಟಿಯಲ್ಲಿ ಮಲೆನಾಡು ಭಾಗದ ಮೂರು ತಾಲೂಕುಗಳು ಸ್ಥಾನ ಪಡೆದುಕೊಂಡಿವೆ. ಉಳಿದ ತಾಲೂಕುಗಳ ಕಡೆಗಣನೆ ಮಾಡಲಾಗಿದೆ. ಜಿಲ್ಲೆಯವರೇ ಆದ ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪಅವರು ತಕ್ಷಣವೇ ಜಿಲ್ಲೆಯ ಉಳಿದ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಬೇಕು ಎಂದು ಜಿಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ಆಗ್ರಹಿಸಿದ್ದಾರೆ.
ಘೋಷಣೆಯಲ್ಲಿ ರಾಜಕಿಯ:
ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಿರುವ ಮೂರು ತಾಲೂಕುಗಳು ಬರ ಪೀಡಿತ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ತಾಲೂಕುಗಳ ಆಯ್ಕೆಯಲ್ಲಿಯೂ ರಾಜಕೀಯ ಮಾಡಲಾಗಿದೆ. ವಾಸ್ತವ ಸ್ಥಿತಿಗತಿಗಳ ಆಧಾರದ ಮೇಲೆ ತಾಲೂಕುಗಳ ಆಯ್ಕೆ ಪ್ರಕ್ರಿಯೆ ನಡೆಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಸೊರಬ ತಾಲೂಕಿನ ಜೆಡಿಎಸ್ ಮುಖಂಡರೊಬ್ಬರು ಪತ್ರಿಕೆಗೆ ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಶಾಸಕರ ತಾಲೂಕುಗಳಲ್ಲಿ ಮಾತ್ರ ಬರ ಬಿದ್ದಿದೆಯೇ? : ಸಿಎಂಗೆ ಶಾಸಕಿ ಶಾರದಾ ಪೂರ್ಯನಾಯ್ಕೆ ಪ್ರಶ್ನೆ:
ಪ್ರಸ್ತುತ ರಾಜ್ಯ ಸರಕಾರ ಪ್ರಕಟಿಸಿರುವ ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಿರುವ ತಾಲೂಕುಗಳು ಮಾತ್ರ ಆಯ್ಕೆಯಾಗಿವೆ. ತೀವ್ರ ಬರ ಎದುರಿಸುತ್ತಿರುವ ಇತರ ತಾಲೂಕುಗಳ ಕಡೆಗಣನೆ ಮಾಡಲಾಗಿದೆ.ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಿರುವ ತಾಲೂಕುಗಳಲ್ಲಿ ಮಾತ್ರ ಬರ ಬಿದ್ದಿದೆಯಾ? ಇದಕ್ಕೆ ಮುಖ್ಯಮಂತ್ರಿಗಳು ಸ್ಪಷ್ಟ ಉತ್ತರ ನೀಡಬೇಕು ಎಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ತಾಲೂಕಿನ ಆಯನೂರು, ಕುಂಸಿ, ಹಾರ್ನಳ್ಳಿ ಹೋಬಳಿಗಳಲ್ಲಿ ಮಳೆ ಕೊರತೆಯಿಂದ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ. ಕೆರೆಕಟ್ಟೆಗಳು ಭರ್ತಿಯಾಗಿಲ್ಲ. ಕುಡಿಯುವ ನೀರಿಗೂ ತತ್ವಾರ ಎದುರಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ರಾಜ್ಯ ಸರಕಾರ ಶಿವಮೊಗ್ಗ ತಾಲೂಕನ್ನು ಬರ ಪೀಡಿತವೆಂದು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಬರ ಪೀಡಿತ ತಾಲೂಕುಗಳ ಆಯ್ಕೆ ಪ್ರಕ್ರಿಯೆಯನ್ನು ನ್ಯಾಯ ಸಮ್ಮತವಾಗಿ ನಡೆಸಬೇಕು. ಅಧಿಕಾರಿಗಳ ಮೂಲಕ ಪರಿಶೀಲನೆ ನಡೆಸಬೇಕು. ಆದರೆ ತಾಲೂಕುಗಳ ಆಯ್ಕೆಯಲ್ಲಿ ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಸುತ್ತಿರುವುದು ಸರಿಯಲ್ಲ. ತಾರತಮ್ಯ ಧೋರಣೆ ಅನುಸರಿಸುತ್ತಿರುವುದು ಬೇಸರದ ಸಂಗತಿ ಎಂದು ತಿಳಿಸಿದ್ದಾರೆ.
ಜಿಲ್ಲೆಯನ್ನೇ ಬರ ಪೀಡಿತವೆಂದು ಘೋಷಿಸಿ: ವೇದಾ:
ಜಿಲ್ಲೆಯಲ್ಲಿ ಮಳೆಯ ತೀವ್ರ ಕೊರತೆ ಉಂಟಾಗಿದೆ. ಪ್ರಮುಖ ಜಲಾಶಯ, ಕೆರೆಕಟ್ಟೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಜಿಲ್ಲೆಯಲ್ಲಿ ತಲೆದೋರಿರುವ ಬರ ಪರಿಸ್ಥಿತಿಯ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆದಿತ್ತು. ಸದಸ್ಯರ ಚರ್ಚೆಯ ಆಧಾರದ ಮೇಲೆ ಜಿಲ್ಲೆಯ ಎಲ್ಲ ಏಳು ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸುವ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿತ್ತು. ಜೊತೆಗೆ ಸರಕಾರಕ್ಕೂ ಸಲ್ಲಿಸಲಾಗಿತ್ತು. ಆದರೆ ಪ್ರಸ್ತುತ ರಾಜ್ಯ ಸರಕಾರ ಪ್ರಕಟಿಸಿರುವ ಬರ ಪಿೀಡಿತ ತಾಲೂಕು ಪಟ್ಟಿಯಲ್ಲಿ ಜಿಲ್ಲೆಯ ಮೂರು ತಾಲೂಕುಗಳು ಮಾತ್ರ ಸ್ಥಾನ ಪಡೆದುಕೊಂಡಿ್ದು, ಉಳಿದ ನಾಲ್ಕು ತಾಲೂಕುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪರವರು ಜಿಲ್ಲೆಯ ಶಿವಮೊಗ್ಗ, ಭದ್ರಾವತಿ, ಸಾಗರ ಹಾಗೂ ಶಿಕಾರಿಪುರ ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸಬೇಕು ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೇದಾ ವಿಜಯಕುಮಾರ್‌ರವರು ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.