ವಿಶ್ವವಿಖ್ಯಾತ ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ
ಮೈಸೂರು, ಅ.1: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು
ಬೆಳಗ್ಗೆ 11 ಗಂಟೆ 40 ನಿಮಿಷಕ್ಕೆ ಶುಭ ಧನುರ್ ಲಗ್ನದಲ್ಲಿ ನಾಡಹಬ್ಬ ದಸರಾಕ್ಕೆ ಚಾಲನೆ ದೊರಕಿದೆ. ಹಿರಿಯ ಸಾಹಿತಿ ಡಾ.ಚೆನ್ನವೀರ ಕಣವಿ ಅವರು ಚಾಮುಂಡಿಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿ ಸನ್ನಿದಿಯಲ್ಲಿ ಬೆಳಗ್ಗೆ 11.40ರ ಶುಭ ಧನುರ್ ಲಗ್ನದಲ್ಲಿ ವಿಶೇಷ ಪೂಜೆ ಸಲ್ಲಿಸಿ,ದೀಪ ಬೆಳಗಿಸುವ ಮೂಲಕ ನಾಡಹಬ್ಬ ದಸರಾಕ್ಕೆ ಚಾಲನೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಮಂದಿ ಸಚಿವರು, ಶಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಾಹಿತಿ ಚೆನ್ನವೀರ ಕಣವಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ನೆರವೇರಿಸಿದರು.
ಸಚಿವರಾದ ಡಾ. ಎಚ್.ಸಿ.ಮಹದೇವಪ್ಪ, ಎಚ್.ಎಸ್.ಮಹದೇವ ಪ್ರಸಾದ್, ಕ್ರೀಡಾಪಟುಗಳಾದ ಅಶ್ವಿನಿ ಪೊನ್ನಪ್ಪ, ದೀಪಾಮಲ್ಲಿಕ್, ಶಾಸಕರಾದ ತನ್ವೀರ್ ಸೇಠ್, ಜಿ.ಟಿ. ದೇವೇಗೌಡ, ಚಿಕ್ಕಮಾದು, ಸಾ.ರಾ.ಮಹೇಶ್ ಉಪಸ್ಥಿತರಿದ್ದರು.
ಇದೇ ವೇಳೆ ಅಂಬಾವಿಳಾಸ ಅರಮನೆಯಲ್ಲಿ ರಾಜಮನೆತನದ ಯದುವೀರ್ ಶ್ರೀಕಂಠದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ಆರಂಭಗೊಂಡಿತು. ಯದುವೀರ್ ಶ್ರೀಕಂಠದತ್ತ ಚಾಮರಾಜ ಒಡೆಯರ್ ರಾಜಪೋಷಾಕು ತೊಟ್ಟು ಕಂಗೊಳಿಸುತ್ತಿದ್ದಾರೆ.
. ದಸರಾ ಕ್ರೀಡಾಕೂಟ, ಕುಸ್ತಿ ಪಂದ್ಯಾವಳಿ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ, ಯುವ ದಸರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ.
ಒಂಬತ್ತು ದಿನಗಳ ಕಾಲ ನವರಾತ್ರಿ ಉತ್ಸವ ನಡೆಯಲಿದ್ದು, ಪ್ರತಿನಿತ್ಯ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 10ರಂದು ಆಯುಧ ಪೂಜೆ ಹಾಗೂ ಖಾಸಗಿ ದರ್ಬಾರ್ , ಅಕ್ಟೋಬರ್ 11ಕ್ಕೆ ಮಧ್ಯಾಹ್ನ 2:14ಕ್ಕೆ ಜಂಬೂ ಸವಾರಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ. ಅಂದು ರಾತ್ರಿ ಪಂಜಿನ ಕವಾಯತ್ ನಡೆಯಲಿದೆ.