×
Ad

ಅ.4ರಿಂದ 9ರವರಿಗೆ ಚಲೋ ಉಡುಪಿ ಸ್ವಾಭಿಮಾನಿ ಜಾಥಾ: ಭಾಸ್ಕರ್ ಪ್ರಸಾದ್

Update: 2016-10-01 16:05 IST

ಬೆಂಗಳೂರು, ಅ.1: ಆಹಾರ ನಮ್ಮ ಆಯ್ಕೆ‌, ಭೂಮಿ ನಮ್ಮ ಹಕ್ಕು ಸೇರಿದಂತೆ ಜಾತಿ, ಧರ್ಮದ ಹೆಸರಿನಲ್ಲಿ ಮೂಲಭೂತವಾದಿಗಳು ನಡೆಸುತ್ತಿರುವ ಎಲ್ಲ ರೀತಿಯ ದೌರ್ಜನ್ಯಗಳ ವಿರುದ್ದ ಅ.4ರಿಂದ 9ರವರಿಗೆ ಚಲೋ ಉಡುಪಿ ಸ್ವಾಭಿಮಾನಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಾಥಾದ ಸಂಚಾಲಕ ಭಾಸ್ಕರ್ ಪ್ರಸಾದ್ ತಿಳಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಸರಕಾರದ ಮಾಜಿ ಅಡ್ವಕೇಟ್ ಜನರಲ್ ರವಿವರ್ಮಕುಮಾರ್ ಜಾಥಾವನ್ನು ಉದ್ಘಾಟಿಸಲಿದ್ದಾರೆ. ಬೇಲೂರು ಮಠದ ನಿಜಗುಣಾನಂದ ಸ್ವಾಮೀಜಿ ಮುಖ್ಯ ಭಾಷಣಕಾರರಾಗಿರುತ್ತಾರೆ. ಈ ವೇಳೆ ಸಾಮಾಜಿಕ ಹೋರಾಟಗಾರರಾದ ದು.ಸರಸ್ವತಿ, ಅನಸೂಯಮ್ಮ, ಎನ್.ವೆಂಕಟೇಶ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಗುಜರಾತ್ ನ ಉನಾದಲ್ಲಿ ದಲಿತ ಸಮುದಾಯದ ಯುವಕರು ದನದ ಚರ್ಮವನ್ನು ಸಾಗಿಸುತ್ತಿದ್ದವರ ಮೇಲೆ ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಹಲ್ಲೆಯನ್ನು ಖಂಡಿಸಿ ಸಂಘಪರಿವಾರದ ವಿರುದ್ಧ ಗುಜರಾತ್ ನಲ್ಲಿ ದೊಡ್ಡ ಮಟ್ಟದ ಪ್ರತಿಭಾಟನಾ ಜಾಥಾ ನಡೆಸಲಾಗಿತ್ತು. ಈ ಹೋರಾಟದ ಸ್ಫೂರ್ತಿಯಿಂದ ರಾಜ್ಯದಲ್ಲೂ ಮೂಲಭೂತವಾದಿಗಳ ವಿರುದ್ಧ ಉಡುಪಿ ಚಲೋ ಜಾಥಾ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ದನ, ಧರ್ಮ, ಮೂಡನಂಬಿಕೆ ಹೆಸರಿನಲ್ಲಿ ಸಂಘ ಪರಿವಾರದವರು ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮೇಲೆ ದಾಳಿಗಳನ್ನು ಮಾಡುತ್ತಿದ್ದಾರೆ. ಇವರ ದಾಳಿಗಳನ್ನು ಶಾಶ್ವತವಾಗಿ ತಡೆದು, ಸಮಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಉಡುಪಿ ಚಲೋ ಸ್ವಾಭಿಮಾನಿ ಸಂಘರ್ಷ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

 ಸಂಘಪರಿವಾರದಲ್ಲಿರುವ ಮೇಲ್ವರ್ಗದ ನಾಯಕರು ದಲಿತರು ಹಾಗೂ ಹಿಂದುಳಿದ ಸಮುದಾಯದವರನ್ನೆ ಬಳಸಿಕೊಂಡು ಸಮಾಜದಲ್ಲಿ ಅಶಾಂತಿ, ಕೋಮುಗಲಭೆಯನ್ನು ಸೃಷ್ಟಿಸುತ್ತಿದ್ದಾರೆ. ಸಂಘಪರಿವಾರದ ಈ ಷಡ್ಯಂತ್ರವನ್ನು ಜನತೆಗೆ ತಿಳಿಸುವ ಅಗತ್ಯವಿದೆ ಎಂದು ತಿಳಿಸಿದರು.

ಬಿವಿಎಸ್ ಸಂಚಾಲಕ ಪ್ರೊ.ಹರಿರಾಮ್ ಮಾತನಾಡಿ, ರಾಜ್ಯದಲ್ಲಿ ಜನಸಾಮಾನ್ಯರ ಮೇಲೆ ಸಂಘಪರಿವಾರದವರ ದೌರ್ಜನ್ಯ ಹೆಚ್ಚುತ್ತಿದೆ. ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ದಲಿತರು ಹಾಗೂ ಅಲ್ಪಸಂಖ್ಯಾತರು ತಿನ್ನುವ ಆಹಾರದ ಹಕ್ಕನ್ನು ಕಸಿಯಲಾಗುತ್ತಿದೆ. ಹೀಗಾಗಿ ಸಂಘಪರಿವಾರಕ್ಕೆ ಎಚ್ಚರಿಕೆ ಕೊಡುವುದಕ್ಕಾಗಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor