×
Ad

ಕೃಷ್ಣರಾಜ ಸಾಗರ ಅಣೆಕಟ್ಟು ಕಟ್ಟಿದ ನಾವು ಬಲಿಪಶುಗಳು: ಸಿದ್ದರಾಮಯ್ಯ

Update: 2016-10-02 13:57 IST

ಬೆಂಗಳೂರು, ಅ.2:  ಕೃಷ್ಣರಾಜ ಸಾಗರ ಅಣೆಕಟ್ಟು ಕಟ್ಟಿದವರು ನಾವು . ಕೇಂದ್ರ ಸರಕಾರ ಅಣೆಕಟ್ಟು ಕಟ್ಟಲು ನಯಾ ಪೈಸೆಯೂ ನೀಡಿಲ್ಲ. ಆದರೆ ನಮಗೆ ನೀರನ್ನು ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ನಾವು ಬಲಿಪಶುಗಳಾಗಿದ್ದೇವೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಗಾಂಧಿ ಭವನದಲ್ಲಿ  ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರವು ತಮಿಳುನಾಡಿಗೆ ನೀರು ಕೊಡಲು ಹೇಳುತ್ತಿದ್ದೆ. ನಮ್ಮಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಪರಿಸ್ಥಿತಿ ಹೀಗಿದ್ದರೂ ಸುಪ್ರೀಂ ಕೋರ್ಟ್‌‌ಗೂ ನಮ್ಮ ಸಮಸ್ಯೆ ಅರ್ಥವಾಗುತ್ತಿಲ್ಲ. ತಮಿಳುನಾಡಿಗೆ ನೀರು ಬಿಡಿ ಎಂದು ಪದೇ ಪದೇ ಆದೇಶ ನೀಡುತ್ತಿದೆ.ನಮ್ಮಲ್ಲಿ ನೀರಿಲ್ಲದಿದ್ದರೆ ನಾವು ಎಲ್ಲಿಂದ ನೀರು ಕೊಡುವುದು ಎಂದು ಅವರು ಹತಾಶೆ ವ್ಯಕ್ತಪಡಿಸಿದರು.

ಕರ್ನಾಟಕದ  ರೈತರ ಅನುಕೂಲಕ್ಕಾಗಿ  ಕೃಷ್ಣ ರಾಜ ಸಾಗರ ಅಣೆಕಟ್ಟನ್ನು  ಮೈಸೂರು ಮಹಾರಾಜರು ಬಹಳ ಕಷ್ಟಪಟ್ಟು ಕಟ್ಟಿದರು. ತಮ್ಮ ರಾಜಮನೆತನದ ಅಪರೂಪದ ಚಿನ್ನಾಭರಣಗಳನ್ನು ಮಾರಿ ಈ ಅಣೆಕಟ್ಟನ್ನು ಕಟ್ಟಿದರು. ಆದರೆ ನಮಗೆ ನೀರು ಉಪಯೋಗಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಕರ್ನಾಟಕ ಹಿಂದಿನಿಂದಲೂ ಅನ್ಯಾಯಕ್ಕೊಳಗಾಗಿದೆ. ನಾವು ಈಗಾಗಲೇ 52 ಟಿಎಂಸಿ ನೀರು ಬಿಟ್ಟಿದ್ದೇವೆ. ಇನ್ನು  ನೀರು ಬಿಡಲು ನಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿದರು.

ಕುಡಿಯಲು ನೀರಿಲ್ಲ. ಈ ಕಾರಣದಿಂದ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಿದರೆ ನಮ್ಮನ್ನು  ವಿಲನ್ ರೀತಿಯಲ್ಲಿ ನೋಡಲಾಗುತ್ತಿದೆ. ಕಾವೇರಿ ವಿಚಾರದಲ್ಲಿ ವಿಲನ್ ಆಗಿದ್ದೇವೆ, ನಮ್ಮ ಸಂಕಷ್ಟ ಮಾತ್ರ  ಕೋರ್ಟ್​​ಗೆ ಅರ್ಥವಾಗ್ತಿಲ್ಲ. ನೀರು ಬಿಡಲೇಬೇಕು ಎಂದು ಸುಪ್ರೀಂಕೋರ್ಟ್ ಹೇಳುತ್ತಿದೆ. ಹೀಗಾಗಿ ಗಾಂಧಿ ಮಾರ್ಗದಲ್ಲಿ ಹೋರಾಡಿ ನ್ಯಾಯ ಪಡೆಯುವುದೊಂದೇ ನಮ್ಮ ಮುಂದಿರುವ ಮಾರ್ಗ  ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News