ಬಿಹಾರದ ಗಯಾ ಜಿಲ್ಲೆಯಲ್ಲಿ ಪೊಲೀಸ್ ಠಾಣಾಧಿಕಾರಿಯ ಹತ್ಯೆ

Update: 2016-10-03 05:56 GMT

ಗಯಾ, ಅ.3: ವಾಯು ವಿಹಾರಕ್ಕೆ ತೆರಳುತ್ತಿದ್ದ ಪೊಲೀಸ್ ಠಾಣಾಧಿಕಾರಿ  ಒಬ್ಬರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದ ಘಟನೆ ಇಂದು ಬೆಳಗ್ಗೆ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ. 

ಕೋಠಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಮುಹಮ್ಮದ್ ಖಿಯಾಮುದ್ದೀನ್ ಎಂಬವರು ಗಯಾ-ಕೋಠಿ ರಸ್ತೆಯನ್ನು ನಡೆದುಕೊಂಡು ಹೋಗುತ್ತಿದ್ದಾಗ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಕಳೆದ ಹತ್ತು ದಿನಗಳಲ್ಲಿ ಗಯಾ ಜಿಲ್ಲೆಯಲ್ಲಿ ಪೊಲೀಸರ ಮೇಲೆ ನಡೆದ ನಾಲ್ಕನೆ  ಪ್ರಕರಣ ಇದಾಗಿದೆ.  ಈ ಪೈಕಿ ಸೆ.24ರಂದು ಪಾಟ್ನಾದ  ಹೊರ ವಲಯದ ಫತ್ವಾ ಪೋಲಿಸ್ ಠಾಣೆಯ ಎಎಸ್ಐ ರಾಮ್ ರಾಜ್ ಚೌದರಿ ಎಂಬವರನ್ನು ದುಷ್ಕರ್ಮಿಗಳು ಹತ್ಯೆಗೈದು, ಅವರ ಬಳಿ ಇದ್ದ ಸರ್ವಿಸ್ ರಿವಾಲ್ವರ್ ನ್ನು ಎಗರಿಸಿಕೊಂಡು ಪರಾರಿಯಾಗಿದ್ದರು.

ಬೈಕ್ ನಲ್ಲಿ  ಆಗಮಿಸಿದ ನಾಲ್ವರು ದುಷ್ಕರ್ಮಿಗಳು ಎಸ್ಎಚ್ಒ ಮುಹಮ್ಮದ್ ಖಿಯಾಮುದ್ದೀನ್ ಅವರನ್ನು ತಡೆದು ನಿಲ್ಲಿಸಿ ವಾಗ್ವಾದ ನಡೆಸಿದ್ದಾರೆ. ಬಳಿಕ ಅವರ ಮೇಲೆ ಹತ್ತಿರದಿಂದಲೇ ಗುಂಡಿನ ದಾಳಿ ನಡೆಸಿ ಕಾಡಿನತ್ತ ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ. ನಕ್ಸಲ್ ಪೀಡಿತ ಪ್ರದೇಶದಲ್ಲಿರುವ ಕೋಠಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ   ದಸರಾ ಮತ್ತು  ಮುಹರ್ರಂ  ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಸಮಾಜಘಾತಕ ಶಕ್ತಿಗಳ ವಿರುದ್ಧ   ಮುಹಮ್ಮದ್ ಖಿಯಾಮುದ್ದೀನ್ ಅವರು ಕಾರ್ಯಾಚರಣೆ ಆರಂಭಿಸಿದ್ದರು. 12ಕ್ಕೂ ಅಧಿಕ   ಆರೋಪಿಗಳನ್ನು ಬಂಧಿಸಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಕರ್ತವ್ಯ ಸೇರಿದ್ದ  ಖಿಯಾಮುದ್ದೀನ್ ಅವರು  ಖಡಕ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. 

ಮುಹಮ್ಮದ್ ಖಿಯಾಮುದ್ದೀನ್ ಅವರನ್ನು ಹತ್ಯೆಗೈದ  ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ ಎಂದು ಗಯಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗರೀಮಾ ಮಲಿಕ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News