ಗೋ ಭಯೋತ್ಪಾದನೆ ಹೆಚ್ಚುತ್ತಿದೆ: ದೇವನೂರು ಮಹಾದೇವ
ಬೆಂಗಳೂರು, ಅ.4: ಭಾರತದಲ್ಲಿ ಭಯೋತ್ಪಾದನೆ ಹೆಚ್ಚುತ್ತಿದೆ. ಅದರ ಜೊತೆಗೆ ಇಂದು ನಕಲಿ ಗೋ ರಕ್ಷಕರಿಂದ ಗೋ ಭಯೋತ್ಪಾದನೆ ಹೆಚ್ಚುತ್ತಿದೆ. ವಿಶ್ವಕ್ಕೆ ಹೊಸದೊಂದು ಗೋ ಭಯೊತ್ಪಾದನೆಯನ್ನು ಭಾರತ ನೀಡುತ್ತಿದೆ. ಭಾರತದಲ್ಲಿ ಸತ್ತಿರುವ ಪ್ರೇತಾತ್ಮಗಳು ಹೆಚ್ಚು ಕ್ರಿಯಾಶೀಲವಾಗಿವೆ. ಅವು ಮನುಷ್ಯನ ಮೈದುಂಬಿಕೊಂಡು ಚೇಷ್ಟೆ ಮಾಡುತ್ತಿವೆ. ಇಂದು ಬದುಕಿರುವವರು ಎಚ್ಚರಗೊಳ್ಳಬೇಕಿದೆ. ಪ್ರಜ್ಞೆ ಪಡೆದುಕೊಳ್ಳಬೇಕಿದೆ. ಇಲ್ಲದೆ ಇದ್ದರೆ ಯಾರು ಬದುಕಿದ್ದಾರೆ ಯಾರು ಸತ್ತಿದ್ದಾರೆ ಗೊತ್ತಾಗುವುದಿಲ್ಲ ಎಂದು ದೇವನೂರು ಮಹಾದೇವ ಹೇಳಿದರು.
ಅವರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಚಲೋ ಉಡುಪಿ -ಸ್ವಾಭಿಮಾನಿ ಸಂಘರ್ಷ ಜಾಥಾದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಭಾರತದಲ್ಲಿ ಒಂದು ಆತ್ಮ ತುಂಡು ಬಿದ್ದಿದೆ. ಅದು ವರ್ಷಕ್ಕೊಮ್ಮೆ ಭೂಮಿ ಮೇಲಕ್ಕೆ ಬರುತ್ತದೆ. ಅದು ಯಾವುದಪ್ಪ ಅಂದರೆ ಬಲಿ ಚಕ್ರವರ್ತಿ. ಒಂದು ಮಲೆಯಾಳಂನ ಒಣಂ ಪದ್ಯದ ಪ್ರಕಾರ ಬಲಿ ರಾಜ್ಯವಾಳುವಾಗ ಎಲ್ಲರೂ ಸಮಾನರಾಗಿದ್ದರು. ಅವರಿಗೆ ಕೆಡಕು ಆಗುತ್ತಿರಲಿಲ್ಲ. ಆ ಕಾಲದಲ್ಲಿ ಸುಳ್ಳು ಆಸ್ವಾಶನೆಗಳು ಇರಲಿಲ್ಲ ಮತ್ತು ವಂಚನೆ ಇರಲಿಲ್ಲ. ಎಲ್ಲಾ ಜನ ಸೇರಿ ಒಂದೇ ಜಾತಿಯಾಗಿದ್ದರು. ಇದೊಂದು ಹಾಡು ಸಾಕು ನಮಗೆ ನಾಡು ಕಟ್ಟಲಿಕ್ಕೆ. ಇಂತಹ ಬಲಿ ಚಕ್ರವರ್ತಿಯನ್ನು ಭಾರತ ತುಳಿದು ಹಾಕಿ ಬಿಟ್ಟಿದೆ. ನಾನು ಯೋಚನೆ ಮಾಡಿದೆ. ಏನೇನು ಇರಬಹುದು ಆವಾಗ ಅಂತ. ಮಾತಿಗೆ ತಪ್ಪದ, ವಚನಭ್ರಷ್ಟನಾಗದ ಬಲಿ ಚಕ್ರವರ್ತಿಯನ್ನು ಒಂದು ಮುಗ್ಧ ಮಗುವಿನ ಮೂಲಕ ಮಾತಿಗೆ ಸಿಕ್ಕಿಸಿಬಿಟ್ಟು, ವಶ ತಗೊಂಡು ಆತನನ್ನು ನೆಲಮಾಳಿಗೆಯಲ್ಲಿಟ್ಟಿಬಿಟ್ಟರು. ಜನಸಮುದಾಯ ಭುಗಿಲೆದ್ದಾಗ ಅವರ ಆಕ್ರೋಶ ತಣಿಸಲಿಕ್ಕೆ ಆಯ್ತಪ್ಪ ವರ್ಷಕ್ಕೊಮ್ಮೆ ಬಂದು ಮುಖ ತೋರಿಸ್ತಾನೆ ಅಂತ ಜನಗಳಿಗೆ ಹೇಳಿ ಸಮಾಧಾನ ಮಾಡಿದ್ದಾರೆ. ಆ ಬಲಿ ಚಕ್ರವರ್ತಿ ಒಣಂ ದಿನ ಸಂಭ್ರಮದಿಂದ ನೃತ್ಯ ಮಾಡುತ್ತಾರೆ. ನೀವು ನನ್ನನ್ನು ಹೊರಗಡೆ ಬಿಡುವ ದಿನ ಯಾರು ಅಳಬಾರದು ಎಂದಿದ್ದಾನೆ. ಅಂತಹ ದೊಡ್ಡ ವ್ಯಕ್ತಿತ್ವ ಆತನದು. ಇಂದು ಭಾರತದಲ್ಲಿ ಪ್ರೀತಿಸಲು ಸಹ ಬಿಡದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ನೀವು ಹೊಸ ಅಕ್ಷರಗಳನ್ನು ಬರೆಯುತ್ತಿದ್ದೀರಿ ಎಂದರು.