ತುಪ್ಪ ತಿಂದವರಿಂದ ದೇಶ ಅವನತಿ : ನಿಜಗುಣಾನಂದ ಸ್ವಾಮೀಜಿ
ಪುರೋಹಿತಶಾಹಿಗಳಿಂದ ದೇವರು, ಧರ್ಮದ ಮಹತ್ವ ಹಾಳು: ನಿಜಗುಣಾನಂದ ಸ್ವಾಮೀಜಿ
ಬೆಂಗಳೂರು, ಸೆ.3: ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬ ಹಾಡಿಗೆ ಅನ್ವರ್ಥವಾಗುವಂತೆ ನಗರದ ಫ್ರೀಡಂಪಾರ್ಕ್‌ನಲ್ಲಿ ದಲಿತ ದಮನಿತರ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ‘ಉಡುಪಿ ಚಲೋ’ ಸ್ವಾಭಿಮಾನಿ ಸಂಘರ್ಷ ಜಾಥಾಕ್ಕೆ ಯುವಕರ ದಂಡು ಘೋಷಣೆ ಕೂಗುತ್ತಾ ಕಾರ್ಯಕ್ರಮಕ್ಕೆ ಆಗಮಿಸಿದರು.
ಜೈ ಭೀಮ್, ಲಾಲ್ ಸಲಾಮ್ ಘೋಷಣೆಗಳನ್ನು ಕೂಗುತ್ತಾ ತಂಡೋಪತಂಡವಾಗಿ ಆಗಮಿಸಿದ ಯುವಕರ ಗುಂಪು ಫ್ರೀಡಂ ಪಾರ್ಕ್‌ನಲ್ಲಿ ಒಟ್ಟಾದರು. ನಂತರ ಮೂಲಭೂತವಾದಿಗಳಿಂದ ಹತ್ಯೆಗೊಳಗಾದ ದಾಭೋಲ್ಕರ್, ಗೋವಿಂದ ಪನ್ಸಾರೆ ಹಾಗೂ ಎಂ.ಎಂ.ಕಲಬುರ್ಗಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಮುದಾಯ ರಂಗ ಕಲಾವಿದರು ‘ಫ್ರಿಜ್‌ನಲ್ಲಿ ಏನಿದೆ’ ಬೀದಿ ನಾಟಕವನ್ನು ಪ್ರದರ್ಶಿಸಿದರು.
ಯುವ ಮುನ್ನಡೆ, ಕ್ರಾಂತಿ ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದವರಿಗೆ ಹೋರಾಟದ ಕಿಚ್ಚನ್ನು ಹತ್ತಿಸಿದರು. ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್, ಹಿರಿಯ ಸಾಹಿತಿ ದೇವನೂರ ಮಹಾದೇವ ಸೇರಿದಂತೆ ಹಲವು ಗಣ್ಯರು ಡೋಲು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ನಂತರ ಮಂಡ್ಯದ ಯುವತಿಯರು ಡೋಲು ಬಾರಿಸಿ ಜಾಥಾಕ್ಕೆ ಹೊಸ ಸಂಚಲನ ಮೂಡಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಮಾತನಾಡಿ, 2011ನೆ ಜನಗಣತಿ ಪ್ರಕಾರ ರಾಜ್ಯದಲ್ಲಿ ಶಾಲೆ, ಕಾಲೇಜು, ಕಾರ್ಖಾನೆಗಳು, ಆಸ್ಪತ್ರೆಗಳಿಗಿಂತ ದೇವಸ್ಥಾನಗಳ ಸಂಖ್ಯೆ ಹೆಚ್ಚಿವೆ ಎಂಬ ಆತಂಕಕಾರಿ ಅಂಶ ವರದಿಯಾಗಿದೆ. ಈ ಮೂಲಕ ನಮ್ಮ ಸರಕಾರಗಳು ಯಾರಿಗೆ ಹಾಗೂ ಎಂತಹ ವಿಚಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಿವೆ ಎಂದು ಗೊತ್ತಾಗುತ್ತದೆ ಎಂದು ತಿಳಿಸಿದರು.
ದೇಶದಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿದ್ದ ರೈತರು ಕುಸಿದು, ರೈತ ಕೂಲಿಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ. ಶೇ.94ರಷ್ಟು ಮಂದಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದು, ಇವರ ಬದುಕಿಗೆ ಯಾವುದೆ ಭದ್ರತೆ ಇಲ್ಲವಾಗಿದೆ. ಹಾಗೂ ಇವರಲ್ಲಿ ಬಹುತೇಕ ಮಂದಿ ದಲಿತರೆ ಆಗಿದ್ದಾರೆ ಎಂದು ಮಾಹಿತಿ ನೀಡಿದರು.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದಲಿತರ ಮೇಲೆ ದೌರ್ಜನ್ಯ ಅವ್ಯಾಹತವಾಗಿ ನಡೆಯುತ್ತಿದೆ. ರಾಜಸ್ಥಾನದಲ್ಲಿ ಶೇ.6ರಷ್ಟಿರುವ ದಲಿತರ ಮೇಲೆ ಹಲ್ಲೆಗಳು ಹೆಚ್ಚಾಗಿವೆ. ದೇಶದಲ್ಲಿ 15 ನಿಮಿಷಕ್ಕೊಂದು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದರೆ, ಗಂಟೆಗೆ ಒಂದರಂತೆ ಕೊಲೆಯಾಗುತ್ತಿದೆ ಎಂದು ರವಿವರ್ಮ ಕುಮಾರ್ ಆತಂಕ ವ್ಯಕ್ತಪಡಿಸಿದರು.
ಪೈಲೂರು ಮಠದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಪುರೋಹಿತಶಾಹಿಗಳು ದೇವರು, ಧರ್ಮದ ಮಹತ್ವವನ್ನು ಹಾಳುಮಾಡುತ್ತಿದ್ದಾರೆ. ಇಂತಹದ್ದೆ ಆಹಾರವನ್ನು ತಿನ್ನಬೇಕೆಂದು ಯಾವ ಧರ್ಮದಲ್ಲೂ ತಿಳಿಸಿಲ್ಲ. ಆದರೆ, ಸಂಪತ್ತು ಹಾಗೂ ಜ್ಞಾನವನ್ನು ಬಚ್ಚಿಟ್ಟುಕೊಂಡಿರುವ ಪುರೋಹಿಶಾಹಿಗಳು ಕುತಂತ್ರದಿಂದ ಆಹಾರದ ಹಕ್ಕಿನ ಮೇಲೆ ದಬ್ಬಾಳಿಕೆಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೇ.1ರಷ್ಟಿರುವ ಮಂದಿ ಶೇ.99ರಷ್ಟರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ದಲಿತರು, ದಮನಿತರು ಹಾಗೂ ಅಲ್ಪಸಂಖ್ಯಾತರು ಚಿಂತಿಸಬೇಕು. ಹಾಗೂ ಒಗ್ಗಟ್ಟಾಗುವ ಮೂಲಕ ಮೂಲಭೂತವಾದಿಗಳಿಗೆ ಕಡಿವಾಣ ಹಾಕಬೇಕು. ಹೀಗಾಗಿ ಯುವಜನತೆಯೆ ಸೇರಿ ಮಾಡುತ್ತಿರುವ ಉಡುಪಿ ಚಲೋ ಜಾಥಾಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಚಿಂತಕ ದೇವನೂರ ಮಹಾದೇವ, ಸಂಶೋಧಕ ರಹಮತ್ ತರೀಕೆರೆ, ಅಂಬೇಡ್ಕರ್‌ವಾದಿ ಚಿಂತಕಿ ಇಂದಿರಾ ಕೃಷ್ಣಪ್ಪ, ಶಾಸಕ ಪುಟ್ಟಣ್ಣಯ್ಯ, ದಸಂಸ ಮಾವಳ್ಳಿ ಶಂಕರ್, ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಚಿಂತಕ ಡಾ.ಜಿ.ರಾಮಕೃಷ್ಣ ಉಪಸ್ಥಿತರಿದ್ದರು.
ತುಪ್ಪ ತಿಂದವರಿಂದ ದೇಶ ಅವನತಿ
ದೇಶದಲ್ಲಿ ಹಲವು ಸಮಸ್ಯೆಗಳು ತಾಂಡವವಾಡುತ್ತಿದ್ದು ಅವನತಿಯತ್ತ ಸಾಗುತ್ತಿರುವುದಕ್ಕೆ ತುಪ್ಪ ತಿಂದ ಪುರೋಹಿತಶಾಹಿಗಳು ಕಾರಣವೆ ಹೊರತು ಮಾಂಸ ತಿಂದ ದಲಿತ, ಅಲ್ಪಸಂಖ್ಯಾತರಿಂದಲ್ಲ. ಹೀಗಾಗಿ ದೇಶವನ್ನು ಪುರೋಹಿತಶಾಹಿಗಳ ಬಿಗಿಮುಷ್ಟಿಯಿಂದ ಮುಕ್ತಿಗೊಳಿಸಬೇಕಾಗಿದೆ.
-ನಿಜಗುಣಾನಂದ ಸ್ವಾಮೀಜಿ, ಪೈಲೂರು ಮಠ