ಪ್ರಪಂಚವನ್ನು ಬದಲಿಸುವ ಶಕ್ತಿ ಮಹಿಳೆಯರಿಗಿದೆ: ಗೌರಿ
ಇಂದು ಸಮಾಜದಲ್ಲಿ ಬ್ರಾಹ್ಮಣ್ಯ ಆವರಿಸಿದೆ. ನಾವು ಏನು ತಿನ್ನಬೇಕು ಏನು ಮಾಡಬೇಕು ಹೇಗಿರಬೇಕೆಂದು ನಮಗೆ ಗೊತ್ತಿಲ್ಲದೆ ನಮ್ಮನ್ನು ನಿಯಂತ್ರಿಸುತ್ತಿದೆ. ಬೆಳಗ್ಗೆ ಟಿವಿಯಲ್ಲಿ ಬರುವ ನಕಲಿ ಜ್ಯೋತಿಷಿಗಳು ಈ ಬ್ರಾಹ್ಮಣ್ಯವನ್ನು ಹರಡುತ್ತಿದ್ದಾರೆ ಇದರ ಬಗ್ಗೆ ಎಚ್ಚರಿಕೆ ವಹಿಸೋಣ ಎಂದು ಕರ್ನಾಟಕ ಜನಶಕ್ತಿಯ ಗೌರಿ ಹೇಳಿದರು.
ನೆಲಮಂಗಲದಲ್ಲಿ ನಡೆಯುತ್ತಿರುವ ಚಲೋ ಉಡುಪಿ ಜಾಥಾದ ವೇದಿಕೆಯನ್ನು ಹಂಚಿಕೊಂಡು ಅವರು ಮಾತಾಡಿದರು.
ಮಹಿಳೆಯರು ಹೆಚ್ಚು ಸಂಘಟನೆಯಲ್ಲಿ ತೊಡಗಿಸಲು ನಾವೆಲ್ಲರೂ ಪ್ರಯತ್ನಿಸಬೇಕು, ಅವರು ಮನಸ್ಸು ಮಾಡಿದರೆ ಪ್ರಪಂಚವನ್ನು ಬದಲಿಸುವ ಶಕ್ತಿ ಇದೆ ಎಂದರು. ಇಂದು ಸಮಾಜದಲ್ಲಿ ಶಿಕ್ಷಿತ ಯುವಜನಾಂಗ ಮುಂದೆ ಬರುತ್ತಿದೆ, ಸ್ವಾಭಿಮಾನದಿಂದ ತಲೆ ಎತ್ತಿ ಬಾಳಲು ಮುಂದಾಗಿದ್ದಾರೆ. ಇದನ್ನು ಸಹಿಸದ ಮೇಲ್ಜಾತಿ ಮನಸ್ಥಿತಿಗಳು ದೌರ್ಜನ್ಯ ಎಸಗುತ್ತಿದ್ದಾರೆ. ಮಹಿಳೆಯರು ಮುಂದೆ ಬಂದರೆ ಅವರ ಮೇಲೆಯೂ ಅತ್ಯಾಚಾರ ನಡೆಯುತ್ತಿದೆ ಇದನ್ನು ಮೆಟ್ಟಿನಿಲ್ಲೋಣ, ಮೌಢ್ಯವನ್ನು, ಬ್ರಾಹ್ಮಣ್ಯದ ಕೊಳೆಯನ್ನು ತೊಳೆಯಲು ಮುಂದಾಗೋಣ ಎಂದು ಕರೆ ನೀಡಿದರು.
ಅಂಬೇಡ್ಕರ್ ರವರ ಶಿಕ್ಷಣ ಸಂಘಟನೆ ಹೋರಾಟದ ಅಸ್ತ್ರದ ಮೂಲಕ ಈ ಜಾಥ ಮತ್ತು ಉಡುಪಿ ಚಲೋ ಚಳವಳಿಯನ್ನು ಯಶಸ್ವಿಗೊಳಿಸೋಣ ಎಂದರು.