×
Ad

ಮನುವಾದಿ, ಜಾತಿವಾದಿ ಮನಸ್ಥಿತಿ ಇಂದು ಹೆಚ್ಚಾಗಿದೆ: ಎನ್ ಮಹೇಶ್

Update: 2016-10-04 20:21 IST

ನಮ್ಮ ದೇಶದಲ್ಲಿ 2009 ರಲ್ಲಿ 33,543 ದಲಿತರ ಮೇಲೆ ದೌರ್ಜನ್ಯ ನಡೆದರೆ 2016ರಲ್ಲಿ 47,064 ಕ್ಕೆ ಏರಿಕೆಯಾಗಿವೆ. ಬಾಬಾ ಸಾಹೇಬರ ಪ್ರಕಾರ ಜೀವ ವಿರೋಧಿ, ಜನವಿರೋಧಿ ಮನಸ್ಥಿತಿಯೇ ಮನುವಾದಿ ಮನಸ್ಥಿತಿಯಾಗಿದ್ದು, ಕಾಂಗ್ರೆಸ್ ಸರ್ಕಾರ ಇದ್ದಾಗಲೂ ದೌರ್ಜನ್ಯ ನಡೆದಿದೆ. ಬಿಜೆಪಿ ಇದ್ದಾಗಲೂ  ನಡೆದಿದೆ. ಕಮ್ಯೂನಿಸ್ಟ್ ಸರ್ಕಾರ ಇದ್ದಾಗಲೂ ನಡೆದಿದೆ ಎಂದು ಬಹುಜನ ಸಮಾಜ ಪಕ್ಷದ ನಾಯಕರಾದ ಎನ್. ಮಹೇಶ್ ಅಭಿಪ್ರಾಯಪಟ್ಟರು.

ಉಡುಪಿ ಚಲೋ ಅಂಗವಾಗಿ ಇಂದು ನೆಲಮಂಗಲಕ್ಕೆ ಆಗಮಿಸಿದ ಸ್ವಾಭಿಮಾನಿ ಸಂಘರ್ಷ ಜಾಥ ಉದ್ದೇಶಿಸಿ ಮಾತನಾಡಿದ ಇವರು, ದೌರ್ಜನ್ಯಕ್ಕೆ ಕಾರಣವನ್ನು ತಿಳಿಯಬೇಕು, ಬಿಜೆಪಿ ಬಂದಾಗ ಜಾಸ್ತಿ ಆಗುವುದು ನಿಜ ಆದರೆ ಒಂದು ವರ್ಗ ಇನ್ನೊಂದು ವರ್ಗದ ಮೇಲೆ ದಬ್ಬಾಳಿಕೆ ಮಾಡಲು ಕಾರಣ ರಾಜಕೀಯ ಅಧಿಕಾರವಾಗಿದೆ. ಅವರಿಗೆ ರಕ್ಷಣೆಯ ಅಭಯವಿರುವುದರಿಂದ ದೌರ್ಜನ್ಯ ಎಸಗುತ್ತಾರೆ. ಇದನ್ನು ಕೊನೆಗಾಣಿಸಲು ದೌರ್ಜನ್ಯಕ್ಕೊಳಗಾದವರಯ ರಾಜಕೀಯ ಅಧಿಕಾರ ಪಡೆಯಬೇಕಾಗಿದೆ ಎಂದರು.

ಧರ್ಮಾಧಾರಿತ ಮತ್ತು ಜಾತ್ಯಾತೀತ ಪಕ್ಷಗಳು ಸಹ ದೌರ್ಜನ್ಯ ಮಾಡುತ್ತಿವೆ. ಜಾತಿಯ ಹಿಂದುತ್ವದ ಮನಸ್ಥಿತಿ ಕೆಲಸ ಮಾಡುತ್ತಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಸಿಗರನಹಳ್ಳಿಯಲ್ಲಿ ಬಸವಣ್ಣನವರ ದೇವಸ್ಥಾನಕ್ಕೆ ದಲಿತರನ್ನು ಒಳಗೆ ಬಿಡದ ಮನಸ್ಥಿತಿ ಜಾತ್ಯಾತೀತವೋ ಇಲ್ಲ ಕೋಮುವಾದಿಯೋ ನೀವೇ ಯೋಚಿಸಿ ಎಂದರು.

ಮಾದರ ಚೆನ್ನಯ್ಯನ ದಾಸಿಯ ಮಗನು ಡೋಹಾರ ಕಕ್ಕಯ್ಯನ ದಾಸಿಯ ಮಗಳು ಇಬ್ಬರು ಬೆರಣಿಗೆ ಹೋಗಿ ಸಂಗವ ಮಾಡಿದರು. ಇವರಿಬ್ಬರಿಗೆ ಹುಟ್ಟಿದ ಮಗ ನಾನು ಎಂದ ಬಸವಣ್ಣನವರನ್ನು ಯಾವ ಜಾತಿಗೆ ಸೇರಿಸುತ್ತೀರಿ ಎಂದು ಪ್ರಶ್ನಿಸಿದರು.

ನಂತರ ಮಾತನಾಡಿದ ನೆಲಮಂಗಲದ ತಹಶೀಲ್ದಾರ್ ರವರು ಇಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ಹೋರಾಟ ನಡೆಯುತ್ತಿದೆ. ನಮ್ಮ ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯ. ಉಡುಪಿ ಚಲೋ ಯಶಸ್ವಿಯಾಗಲಿ ಎಂದರು.

ಅಗ್ನಿ ಪತ್ರಿಕೆ ಸಂಪಾದಕ ಮಂಜುನಾಥ ಅದ್ದೆ, ಅಖಿಲ ವಿದ್ಯಾಸಂದ್ರ, ಜನಶಕ್ತಿಯ ಗೌರಿ, ಮಲ್ಲಿಗೆ, ಬಿ.ಆರ್. ಭಾಸ್ಕರ್ ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor