ಬರ ಪೀಡಿತ ಘೋಷಣೆಗೆ ಆಗ್ರಹಿಸಿ ಧರಣಿ
ಶಿವಮೊಗ್ಗ, ಅ. 4: ಶಿವಮೊಗ್ಗ ತಾಲೂಕಿನ ಹಾರ್ನಳ್ಳಿ ಹೋಬಳಿಯನ್ನು ಬರ ಪೀಡಿತವೆಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿ ಮಂಗಳವಾರ ಹಾರನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ನಗರದ ಜಿಲ್ಲಾಧಿಕಾರಿ ಹಾಗೂ ಜಿಪಂ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿ, ಸ್ಥಳೀಯ ಅಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಬಿದ್ದಿಲ್ಲ. ವಾಡಿಕೆಯ ವರ್ಷಧಾರೆಯೂ ಆಗಿಲ್ಲ. ಇದರಿಂದ ಕೆರೆಕಟ್ಟೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಹಾರನಹಳ್ಳಿ
ಹೋಬಳಿ ವ್ಯಾಪ್ತಿಯಲ್ಲಿ ಮಳೆಯಾಶ್ರಿತ ಕೃಷಿ ಭೂಮಿಯ ಪ್ರಮಾಣ ಹೆಚ್ಚಿದ್ದು, ಮಳೆ ಕೊರತೆಯಿಂದ ಬೆಳೆಯು ಒಣಗಲಾರಂಭಿಸಿದೆ. ಇದರಿಂದ ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ ಎಂದು ಧರಣಿ ನಿರತರು ದೂರಿದ್ದಾರೆ. ಕಳೆದ ಕೆಲ ದಿನಗಳಿಂದ ಹಾರನಹಳ್ಳಿ
ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಭವಿಷ್ಯದ ದಿನಗಳಲ್ಲಿ ಜನರು ಮಾತ್ರವಲ್ಲದೆ ಜಾನುವಾರುಗಳೂ ಕುಡಿಯುವ ನೀರಿಗೆ ಪರಿತಪಿಸುವಂತಾಗುತ್ತದೆ ಎಂದು ಧರಣಿ ನಿರತರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಾರನಹಳ್ಳಿ ಹೋಬಳಿಯನ್ನು ಬರ ಪೀಡಿತವೆಂದು ಘೋಷಣೆ ಮಾಡಬೇಕು. ಈಗಾಗಲೇ ಸ್ಥಳೀಯ ಗ್ರಾಪಂ ವಿಶೇಷ ಗ್ರಾಮಸಭೆಯಲ್ಲಿ ಹಾರನಹಳ್ಳಿ ಹೋಬಳಿಯನ್ನು ಬರ ಪೀಡಿತವೆಂದು ಘೋಷಿಸಬೇಕೆಂಬ ನಿರ್ಣಯ ಅಂಗೀಕರಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ತಕ್ಷಣವೇ ಶಿವಮೊಗ್ಗ ತಾಲೂಕು ಸೇರಿದಂತೆ ಹಾರನಹಳ್ಳಿ ಹೋಬಳಿಯನ್ನು ಬರ ಪೀಡಿತವೆಂದು ಘೋಷಿಸಬೇಕು. ಗ್ರಾಮದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಕ್ರಮಕೈಗೊಳ್ಳಬೇಕು. ಬೆಳೆ ನಷ್ಟಕ್ಕೀಡಾದ ರೈತರಿಗೆ ಸೂಕ್ತ ಪರಿಹಾರ ಧನ ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ. ಧರಣಿಯಲ್ಲಿ ಹಾರ್ನಳ್ಳಿ ಗ್ರಾಪಂ ಅಧ್ಯಕ್ಷೆ ರತ್ನಬಾಯಿ, ಉಪಾಧ್ಯಕ್ಷ ರಾಮರಾವ್, ಸದಸ್ಯರಾದ ಪುಷ್ಪಾ, ರತ್ನಾ, ಮಂಜುಳಾ, ಹಳದಮ್ಮ ಮತ್ತಿತರರಿದ್ದರು.