×
Ad

ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ: ಶಾಸಕ ಮಧು ಬಂಗಾರಪ್ಪ

Update: 2016-10-04 21:59 IST

ಸೊರಬ, ಅ.4: ಸರಕಾರದಿಂದ ಜಾರಿಯಾಗುವ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಿದಾಗ ಮಾತ್ರ ಜನಪ್ರತಿನಿಧಿಗಳಿಗೆ ಉತ್ತಮ ಹೆಸರು ಬರಲು ಸಾಧ್ಯ ಎಂದು ಶಾಸಕ ಮಧು ಬಂಗಾರಪ್ಪಹೇಳಿದರು.

ಮಂಗಳವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ನೂತನ ಹೆಚ್ಚುವರಿ ಕಟ್ಟಡ ಉದ್ಘಾಟನಾ ಪೂರ್ವಭಾವಿ ಸಭೆೆ ಹಾಗೂ ಆರೋಗ್ಯ ರಕ್ಷಾ ಸಮಿತಿ ಸಭೆೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪಬೇಕಾದರೆ ಅಧಿಕಾರಿಗಳು ಅನುಷ್ಠಾನಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಪ್ರಸೂತಿ ಸಮಯದಲ್ಲಿ ವೈದ್ಯರು ಎಚ್ಚರಿಕೆ ವಹಿಸಬೇಕು. ಗ್ರಾಮೀಣ ಪ್ರದೇಶಗಳಿಂದ ಬರುವ ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ ಅನೇಕ ಅನನುಕೂಲಗಳು ಎದುರಾಗುತ್ತವೆ. ಆದ್ದರಿಂದ ವೈದ್ಯರು ಸೂಕ್ಷ್ಮವಾಗಿ ಹೆರಿಗೆ ವೇಳೆಯಲ್ಲಿ ಸಮಯ ಪ್ರಜ್ಞೆ ಮೆರೆಯಬೇಕು ಎಂದು ಸಲಹೆ ನೀಡಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಆಲ್ಟ್ರಾಸೌಂಡ್ ಸ್ಕಾನಿಂಗ್, ಅಪರೇಟಿವ್ ಮೈಕ್ರೋಸ್ಕೋಪ್ ಹಾಗೂ ಡಯಾಲಿಸಿಸ್ ಕೇಂದ್ರದ ಆವಶ್ಯಕತೆಯಿದ್ದು, ಸೌಲಭ್ಯಗಳನ್ನು ಒದಗಿಸುವಂತೆ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗಿದೆ ಎಂದರು. ಆಸ್ಪತ್ರೆಯಲ್ಲಿನ ಕುಂದು ಕೊರತೆಗಳ ಬಗ್ಗೆ ಸಂಬಂಧಪಟ್ಟ ಸಚಿವರ ಗಮನಕ್ಕೆ ತರುವಲ್ಲಿ ಮೇಲಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದ ಅವರು, ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ಇಬ್ಬರು ವೈದ್ಯರು ಸೇವಾ ಸಮಯದಲ್ಲಿಯೇ ಖಾಸಗಿ ನರ್ಸಿಂಗ್ ಹೋಮ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ಅನೇಕ ಸಭೆೆಗಳಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ವೈದ್ಯಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ ಅವರಿಗೆ ಸೂಚಿಸಿದರು.

 ಜಿಲ್ಲಾ ವೈದ್ಯಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಮಾತನಾಡಿ, ತಾಲೂಕಿನಲ್ಲಿ ವೈದ್ಯರ ಕೊರತೆಯಿದ್ದು, ಎಂಬಿಬಿಎಸ್ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಸರಕಾರ ಆದೇಶಿಸಿದ್ದು, ಎಂಬಿಬಿಎಸ್ ವೈದ್ಯರು ಸಿಗದಿದ್ದಲ್ಲಿ ಬಿಎಎಂಎಸ್ ವೈದ್ಯರನ್ನು ನೇಮಿಸಿಕೊಂಡು ವೈದ್ಯರ ಕೊರತೆ ನೀಗಿಸಲಾಗುವುದು ಎಂದ ಅವರು, ಸದ್ಯದಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದರು.

ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್ ಕೊಟಗಿ, ಪಪಂ ಅಧ್ಯಕ್ಷೆ ಬೀಬಿ ಝುಲೇಖಾ, ಉಪಾಧ್ಯಕ್ಷೆ ರತ್ನಮ್ಮ, ಕೆ.ಅಜ್ಜಪ್ಪ, ತಾಪಂ ಇಒ ಎಸ್‌ಎಂಡಿ ಇಸ್ಮಾಯೀಲ್, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಲೋಕೇಶ್, ತಾಲೂಕು ವೈದ್ಯಾಧಿಕಾರಿ ಡಾ.ಸತೀಶ್, ಡಾ.ಶಮಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News