×
Ad

ಕಾರವಾರ: ಡಂಪಿಂಗ್ ಯಾರ್ಡ್ ಸ್ಥಳಾಂತರಕ್ಕೆ ಗ್ರಾಮಸ್ಥರ ಪಟ್ಟು

Update: 2016-10-04 22:00 IST

ಕಾರವಾರ, ಅ.4: ತಾಲೂಕಿನ ಶಿರವಾಡದಲ್ಲಿನ ನಗರಸಭೆ ತ್ಯಾಜ್ಯ ವಿಲೇವಾರಿ ಘಟಕವನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಸ್ಥಳೀಯರು ಅಧಿಕಾರಿಗಳ ಜೊತೆಗೆ ಮಾತಿನ ಚಕಮಕಿ ನಡೆಸಿದರು.

ಶಿರವಾಡದಲ್ಲಿ ತ್ಯಾಜ್ಯ ವಿಲೇವಾರಿ ಘಟಕವಿದ್ದು ಇದರಿಂದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಗಬ್ಬು ನಾರುತ್ತಿದ್ದು ಜಜೀವನ ಅಸ್ತವ್ಯವಸ್ತವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಶಿರವಾಡದಲ್ಲಿ 80ಕ್ಕೂ ಹೆಚ್ಚಿನ ಜನರಿಗೆ ಡೆಂಗ್ ಜ್ವರದ ಶಂಕೆ ಇದೆ. ಹೀಗಾಗಿ ಈ ಸ್ಥಳದಲ್ಲಿ ಕಸ ವಿಲೇವಾರಿ ಬೇಡ ಎಂದು ಸ್ಥಳೀಯ ಮುಖಂಡ ಸಮೀರ್ ಆಕ್ಷೇಪ ವ್ಯಕ್ತಪಡಿಸಿದರು. ಈಗಾಗಲೇ 100ಟನ್‌ಗೂ ಹೆಚ್ಚಿನ ಪ್ರಮಾಣದಲ್ಲಿ ಕಸ ಸಂಗ್ರಹವಾಗಿದೆ. ಎಷ್ಟೇ ಬಾರಿ ಪ್ರತಿಭಟಿಸಿ, ನಗರ ಸಭೆಯ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುತ್ತಿಲ್ಲ. ಶಿರವಾಡದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನವಸತಿಯಿದೆ. ಕೂಡಲೇ ಇಲ್ಲಿರುವ ಘನತ್ಯಾಜ್ಯವನ್ನು ಬೇರೆ ಕಡೆ ಸಾಗಿಸಿ ಎಂದು ಆಗ್ರಹಿಸಿದರು. ಕಸ ವಿಲೇವಾರಿ ಘಟಕದ ಸುತ್ತ ಕಾಂಪೌಂಡ್ ಇಲ್ಲದೆ ದನಗಳ ಪ್ಲಾಸ್ಟಿಕ್‌ಗಳನ್ನು ತಿಂದು ಸಾಯುತ್ತಿವೆ ಎಂದರು. ಇದಕ್ಕೆ ತಹಶೀಲ್ದಾರ್ ಜಿ. ಎನ್. ನಾಯ್ಕ, ನಗರಸಭೆ ಆಯುಕ್ತ ಜಿ.ಎನ್. ಜತ್ತನ್ನ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳೀಯರ ಮನವೊಲಿಸಲು ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಬೆಳಗ್ಗೆ ಸುಮಾರು 7ಗಂಟೆಯಿಂದ ಪ್ರಾರಂಭವಾದ ಪ್ರತಿಭಟನೆ 11 ಗಂಟೆವರೆಗೆ ನಡೆಯಿತು. ಬಳಿಕ ನಗರಸಭೆ ಆಯುಕ್ತ ಜತ್ತನ್ನ ಮಾತನಾಡಿ, ಕಸವಿಲೇವಾರಿ ಪ್ರದೇಶಕ್ಕೆ ದನಗಳು ಬರದಂತೆ ಘಟಕದ ಸುತ್ತ ಕಾಂಪೌಂಡ್ ಹಾಕಲಾಗುವುದು. ಒಂದುವಾರ ಕಾಲಾವಕಾಶ ಕಲ್ಪಿಸಿ ಜನರ ಸಮಸ್ಯೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಬಳಿಕ ಸ್ಥಳೀಯರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು. ಪ್ರತಿಭಟನೆಯಲ್ಲಿ ಜಿಪಂ ಸದಸ್ಯೆ ಚೈತ್ರಾ ಕೊಠಾರಕರ, ತಾಪಂ ಸದಸ್ಯ ಮಾರುತಿ ನಾಯ್ಕ, ಕಿಶೋರ್ ಶೇಜವಾಡಕರ್, ಗ್ರಾಪಂ ಸದಸ್ಯ ಸಿದ್ದಾರ್ಥ ನಾಯ್ಕ, ಉದಯ ಬಶೆಟ್ಟಿ, ನಂದನ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News