×
Ad

ಖಾಸಗಿ ಶಾಲಾ ವ್ಯಾಮೋಹಕೆ ಮಕ್ಕಳು ಬಲಿ: ಸುಧೀರ್ ಅಭಿಪ್ರಾಯ

Update: 2016-10-04 22:05 IST

ಶಿವಮೊಗ್ಗ, ಅ.4: ಮಕ್ಕಳು ಕನ್ನಡಿ ಇದ್ದ ಹಾಗೆ. ಮಕ್ಕಳ ಸಲುವಾಗಿ ನಾವು ನಮ್ಮ ಹವ್ಯಾಸಗಳಿಗೆ ಕಡಿವಾಣಗಳನ್ನು ಹಾಕಿಕೊಳ್ಳಬೇಕು. ಶಾಲೆಯಲ್ಲಿ ಇರುವ ಶಿಕ್ಷಕರು ಮಾತ್ರ ಮಕ್ಕಳ ಗುರುಗಳಲ್ಲ. ಗಾಂಧಿ ದೊಡ್ಡವರಾದದ್ದು ತಮ್ಮ ಭಾಷಣಗಳಿಂದಲ್ಲ. ತಾವು ಹೇಳಿದ್ದನ್ನು ಸ್ವತಃ ಅನುಸರಿಸಿದ್ದರಿಂದ. ಗಾಂಧಿಯಂತೆ ಊರಿನ ಪ್ರತಿಯೊಬ್ಬರು ತಮ್ಮ ನಡವಳಿಕೆಯಿಂದ ಊರಿನ ಮಕ್ಕಳಿಗೆ ಗುರುವಾಗಬೇಕು ಎಂದು ಬೆಂಗಳೂರಿನ ‘ಇಂಡಿಯನ್ ಮನಿ ಡಾಟ್ ಕಾಮ್’ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸುಧೀರ್ ಹರಳಿಮಠ ಅಭಿಪ್ರಾಯಪಟ್ಟರು.

 ಹರಳಿಮಠದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಜಾ ಹಿರಿಯಣ್ಣಪ್ಪ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.

ಖಾಸಗಿ ಶಾಲೆಗಳ ಬಗ್ಗೆ ಪೋಷಕರಿಗೆ ಅನಗತ್ಯ ಮೋಹ ಉಂಟಾಗಿದೆ. ಸವಲತ್ತುಗಳ ದೃಷ್ಟಿಯಲ್ಲಿ ಆಕರ್ಷಕವಾಗಿ ಕಾಣುವ ಶಾಲೆಗಳಿಗೆ ಸೇರಿಸಿದಾಕ್ಷಣ ತಮ್ಮ ಮಕ್ಕಳು ಸಾಧನೆ ಮಾಡುತ್ತಾರೆಂದು ನಿರೀಕ್ಷಿಸಲಾಗದು. ಮುಖ್ಯವಾಗಿ ಮಕ್ಕಳು ತಮ್ಮ ವ್ಯಕ್ತಿತ್ವದಲ್ಲಿ ಭ್ರಷ್ಟರಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಎಚ್ಚರಿಸಿದರು.

ಶಾಲೆಗೆ ಸುಧೀರ್ ತಮ್ಮ ಸಂಸ್ಥೆಯ ವತಿಯಿಂದ ಕಂಪ್ಯೂಟರ್ ದೇಣಿಗೆಯಾಗಿ ನೀಡಿದರು. ಇದೇ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಪ್ರಕಾಶ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಸರ್ಜಾ ಶಂಕರ್ ಹರಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಶ್ರೀಕಂಠ ಅಂದಗೆರೆ, ಸದಸ್ಯರಾದ ರತ್ನಾಕರ್, ಕಸಬಾ ಸೊಸೈಟಿಯ ಅಧ್ಯಕ್ಷ ರಾಜ್ ಕಮಲ್, ಮುಖಂಡರಾದ ಸುರೇಂದ್ರ, ಭಾನು ಪ್ರಕಾಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಕಂಕಳೆ, ಉಪಾಧ್ಯಕ್ಷೆ ನಾಗರತ್ನಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ರಮೇಶ್ ಸ್ವಾಗತಿಸಿದರು. ಶಿಕ್ಷಕಿಯರಾದ ಉಷಾ ಕುಮಾರಿ ಮತ್ತು ಶಿಲ್ಪಾನಿರೂಪಿಸಿದರು. ಜಯಪ್ಪ ವಂದಿಸಿದರು.

 5ನೆ ತರಗತಿಯ ಶ್ರಾವ್ಯಾ ಎಚ್.ಎಸ್, ಅರ್ಪಾತ್ ಕೆ.ವಿ, ನವೀನ ಎಚ್.ಆರ್, 7ನೆ ತರಗತಿಯ ಇರ್ಫಾನ್ ಕೆ.ಎಂ, ಚರಣ್ ಎಸ್, ಸುದೀಪ ಡಿ.ಎಂ, 10ನೆ ತರಗತಿಯ ಚೇತನ್ ಎಸ್, ಪೂರ್ವಿಕಾ ಕೆ.ಎಂ ಮತ್ತು ಶೃತಿ ಕೆ.ಟಿ ಇವರುಗಳು 22ನೆ ವರ್ಷದ ಸರ್ಜಾ ಹಿರಿಯಣ್ಣಪ್ಪ ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News