ಸಾಗರ: ಅಡಿಕೆಗೆ ಶೀಘ್ರ ಬೆಂಬಲ ಬೆಲೆ ಘೋಷಣೆ: ಸಚಿವೆ ನಿರ್ಮಲಾ ಸೀತಾರಾಮನ್
ಸಾಗರ, ಅ.4: ಕೇಂದ್ರ ಸರಕಾರ ಅಡಿಕೆಗೆ ಶೀಘ್ರದಲ್ಲಿಯೇ ಬೆಂಬಲ ಬೆಲೆ ಘೋಷಣೆ ಮಾಡಲಿದೆ. ಕೇಂದ್ರ ಸರಕಾರ ಎಂದಿಗೂ ಅಡಿಕೆ ಬೆಳೆಗಾರರ ಪರವಾಗಿ ಇರುತ್ತದೆ ಎಂದು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ವಾಣಿಜ್ಯ ಸಚಿವರನ್ನು ಸೋಮವಾರ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ ನೇತೃತ್ವದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದ ವೇಳೆ ಅವರು ಈ ಬಗ್ಗೆ ಮಾತನಾಡಿದರು.
ಅಡಿಕೆ ಧಾರಣೆ ತೀವ್ರ ಕುಸಿಯುತ್ತಿದ್ದು, ಬೆಳೆಗಾರರು ಆತಂಕದಲ್ಲಿದ್ದಾರೆ. ಜೊತೆಗೆ ಮಲೆನಾಡು ಭಾಗದಲ್ಲಿ ಕಳೆದ ಬೇಸಿಗೆಯಲ್ಲಿ ವಿಪರೀತ ಬಿಸಿಲಿನಿಂದ ಅಡಿಕೆ ತೋಟಗಳಿಗೆ ಸಾಕಷ್ಟು ಹಾನಿಯಾಗಿದೆ. ಈ ಬಾರಿ ಮಳೆ ಸಹ ನಿರೀಕ್ಷಿತ ಪ್ರಮಾಣದಲ್ಲಿ ಬಿದ್ದಿಲ್ಲ. ಇದರಿಂದ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಸಚಿವರ ಗಮನಕ್ಕೆ ತಂದರು. ಬೆಂಬಲಬೆಲೆ ಕುರಿತ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಕಳುಹಿಸುತ್ತದೆ ಎಂದು ಕಾಯುವುದಕ್ಕಿಂತ, ಕೇಂದ್ರವೇ ಅಡಿಕೆ ಬೆಳೆಗಾರರ ಸ್ಥಿತಿಗತಿಯನ್ನು ಅರಿತು ಬೆಂಬಲಬೆಲೆ ಘೋಷಣೆ ಮಾಡಬೇಕು. ಕೆಂಪು ಹಾಗೂ ಚಾಲಿ ಅಡಿಕೆಗೆ ಗರಿಷ್ಠ ಬೆಂಬಲಬೆಲೆ ಘೋಷಣೆ ಮಾಡುವುದರಿಂದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಏರಿಳಿತಕ್ಕೆ ಸ್ವಲ್ಪಕಡಿವಾಣ ಬೀಳಲಿದೆ ಎಂದು ಬಿಎಸ್‌ವೈ ತಿಳಿಸಿದರು. ಶೀಘ್ರ ಬೆಂಬಲಬೆಲೆ ಘೋಷಣೆ:
ನಿಯೋಗದ ಮನವಿ ಆಲಿಸಿ ಮಾತನಾಡಿದ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್, ಅಡಿಕೆ ಬೆಂಬಲ ಬೆಲೆ ಕುರಿತು ಸಧ್ಯದಲ್ಲಿಯೆ ಕೇಂದ್ರ ಸರಕಾರ ಅಧಿಕೃತ ಆದೇಶ ಪ್ರಕಟಿಸಲಿದೆ. ಕೆಂಪು ಅಡಿಕೆ ಹಾಗೂ ಚಾಲಿ ಅಡಿಕೆಗೆ ಗರಿಷ್ಠ ಬೆಂಬಲಬೆಲೆ ನೀಡುವ ಸಂಬಂಧ ಸಂಸದರಾದ ಯಡಿಯೂರಪ್ಪಅವರು ಈಗಾಗಲೇ ಮನವಿ ಮಾಡಿದ್ದಾರೆ. ಈಗಾಗಲೇ ಬೆಂಬಲಬೆಲೆ ಅಂತಿಮಗೊಳಿಸುವ ನಿಟ್ಟಿನಲ್ಲಿ ವರದಿ ಸಿದ್ಧವಾಗಿದ್ದು, ಶೀಘ್ರದಲ್ಲಿಯೆ ಸಿಹಿಸುದ್ದಿಯನ್ನು ಪ್ರಕಟಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ರುದ್ರೇಗೌಡ, ಟಿ.ಡಿ. ಮೇಘರಾಜ್, ಡಿ.ಎಸ್.ಅರುಣ್, ಎಸ್. ದತ್ತಾತ್ರಿ, ಚೆನ್ನಬಸಪ್ಪ, ಪಾಣಿರಾಜಪ್ಪ ಮತ್ತಿತರರು ಹಾಜರಿದ್ದರು