×
Ad

ಉಡುಪಿ ಚಲೋ: ದೇವನೂರು ಮಹಾದೇವ ಹೇಳಿದ್ದು...

Update: 2016-10-04 23:18 IST

ಇವತ್ತು ಸ್ವಾತಂತ್ರ್ಯ ಕಸಿಯುತ್ತಿದೆ. ಬಡವರು ಬಲ್ಲಿದರ ನಡುವಿನ ಅಸಮಾನತೆ ಹೆಚ್ಚುತ್ತಿದೆ. ಸಂವಿಧಾನದ ಆಶಯಗಳು ಸ್ವಾತಂತ್ರ, ಸಮಾನತೆ, ಸೋದರತೆ ಮತ್ತು ನ್ಯಾಯ ಇಲ್ಲವಾಗಿವೆ.

ಒಂದನ್ನು ಅರ್ಥಮಾಡಿಕೊಳ್ಳೋಣ. ಈ ದೇಶದ ಮೂಲನಿವಾಸಿಗಳ ಸಹನೆ, ತಾಳ್ಮೆ ಯಾವ ದೇಶದಲ್ಲಿಯೂ ಇಲ್ಲ. ಈ ತಾಳ್ಮೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದಾರೆ. ಬಹುಶಃ ಜಾತಿಪದ್ದತಿ, ಇದರೊಳಗೆ ಅಸಹಿಷ್ಣುತೆ ಎಂಬುದು ಅಡಕವಾಗಿದೆ. ಇದು ಯೋತ್ಪಾದನೆ ಉಂಟು ಮಾಡುತ್ತಿದೆ. ನಾನು ನಿನ್ನಂತೆ ಆಗುತ್ತೇನೆ ಎಂದರೆ ಅದನ್ನು ಸಹಿಸೋಕೆ ಆಗುತ್ತಿಲ್ಲ ಎಂದರೆ ಅಮಾನವೀಯತೆ ಎಷ್ಟಿದೆ ನೋಡಿ. ಇಡೀ ಸಮಾಜದಲ್ಲಿ ಎಚ್ಚೆತ್ತವರು ಇದಕ್ಕೆ ಮುಖಾಮುಖಿ ಆಗಬೇಕು. 1857ರಲ್ಲಿ ಮೊದಲ ಸ್ವಾತಂತ್ರ್ಯ ಹೋರಾಟದಲ್ಲಿ ಜ್ಯೋತಿ ಬಾಪುಲೆಗೆ ಆತಂಕ ಉಂಟಾಗಿತ್ತು. ಎಲ್ಲಿ ಬ್ರೀಟಿಷರು ಸೋತು ಪೇಶ್ವೆಗಳು ಗೆದ್ದರೆ ಮತ್ತೆ ಅದೇ ಗುಲಾಮಗಿರಿ ಅಸಮಾನತೆಯ ಸಮಾಜ ಪುನರ್ ಸ್ಫಾಪಿತವಾಗುತ್ತದೆ ಎಂಬ ಭಯ ಕಾಡುತ್ತಿತ್ತು.

ಹೌದು ಈ ದೇಶ ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕಾಗಿ ಹೋರಾಡಬೇಕಿದೆ ಇಂದು. ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಹೋರಾಟದ ಜೊತೆಗೆ ಆದಷ್ಟು ಸಾರ್ವಜನಿಕ ಶಾಲೆಗಳನ್ನು ಉಳಿಸಲು ನಾವು ಕೈಜೋಡಿಸಬೇಕು. ತಾಯಿ ಸಾವಿತ್ರಿಬಾಯಿ ಹುಟ್ಟಿದ ದಿನವನ್ನು ಶಿಕ್ಷಕರದಿನವಾಗಿ ಆಚರಿಸಬೇಕು. ಇಂದಿನ ಶಿಕ್ಷಣ ನೀತಿ ಇಂದಿನ ಛಿದ್ರಗೊಂಡ ಭಾರತವನ್ನು ಮತ್ತಷ್ಟು ಛಿದ್ರಗೊಳಿಸುತ್ತಿದೆ. ಶಿಕ್ಷಣವನ್ನು ಕೊಟ್ಟಹಾಗೆ ಕೊಟ್ಟು ಕೊಡದ ಹಾಗೆ ಮಾಡುವುದೇ ಇವತ್ತಿನ ಶಿಕ್ಷಣದ ನೀತಿ. ಇವತ್ತು ಈ ಪರಿಸ್ಥಿತಿ ಇರುವುದರಿಂದಲೇ ನಾಮ ಆಹಾರ ನಮ್ಮ ಹಕ್ಕು ಅಂತ ಕೇಳಬೇಕಾದ ಪರಿಸ್ಥಿತಿಯನ್ನು ಹುಟ್ಟು ಹಾಕಿದ್ದಾರೆ. ಉದಾಹರಣೆಗೆ ನನ್ನ ಗೆಳೆಯರೊಬ್ಬರು ಕೃಷ್ಣಶರ್ಮಾ ಎಂಬುವವರು ಮಾಂಸ ತಿನ್ನುತ್ತಾರೆ. ನೇಪಾಳ, ಅಸ್ಸಾಂನಲ್ಲಿ ಬ್ರಾಹ್ಮಣರು ಕೂಡ ಮಾಂಸಹಾರಿಗಳೇ. ಗೋರಕ್ಷಣೆ ಮಾಡುವವರು ಭಯೋತ್ಪಾದನೆ ಮಾಡುತ್ತಿದ್ದಾರೆ. ಆ ಮೂಲಕ ಗೋ ಭಯೋತ್ಪಾದನೆ ಎಂಬುದು ಪ್ರಪಂಚಕ್ಕೆ ಭಾರತದ ಕೊಡುಗೆಯಾಗಿರುವುದು ದುರಂತ.

ಭಾರತದಲ್ಲಿ ಸತ್ತಂತಿರುವ ಪ್ರೇತಾತ್ಮಗಳು ಹೆಚ್ಚು ಕ್ರಿಯಾಶೀಲವಾಗಿವೆ. ನಾವು ಪ್ರಜ್ಞೆ ಪಡೆದುಕೊಳ್ಳಬೇಕಿದೆ. ಇಲ್ಲದಿದ್ದರೆ ಯಾರು ಬದುಕಿದ್ದಾರೆ ಯಾರು ಸತ್ತಿದ್ದಾರೆ ಗೊತ್ತಾಗಲ್ಲ. ಭಾರತದಲ್ಲಿ ಒಂದು ಆತ್ಮ ವರ್ಷಕ್ಕೊಮ್ಮೆ ಭೂಮಿಗೆ ಬರುತ್ತಿದೆ. ಅದು ಬಲಿ ಚಕ್ರವರ್ತಿ. ಬಲಿ ರಾಜ್ಯವಾಳುವಾಗ ಎಲ್ಲರೂ ಸಮಾನರಾಗಿದ್ದರು. ಸುಳ್ಳು ಆಶ್ವಾಸನೆಗಳಿರಲಿಲ್ಲ. ವಂಚನೆ ಇರಲಿಲ್ಲ. ಇಂತಹ ಬಲಿ ಚಕ್ರವರ್ತಿಯನ್ನು ಭಾರತ ತುಳಿದುಹಾಕಿಬಿಟ್ಟಿದೆ. ಇಂದು ನೀವು ಹುಡುಕುತ್ತಿರುವ ಪ್ರೀತಿಗಾಗಿ, ಸಮಾನತೆಗಾಗಿ ಹೆಜ್ಜೆಗಳು ಇವು ಮಾನವೀಯತೆಯ ನಾಡನ್ನು ರೂಪಿಸುವಂತಾಗಲಿ ಈ ಅಕ್ಷರಗಳಿಗೆ ಧನ್ಯವಾದಗಳು.

- ದೇವನೂರು ಮಹಾದೇವ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor