×
Ad

ದಂಡ ವಿಧಿಸಿದ್ದಕ್ಕಾಗಿ ಬಸ್ ನಲ್ಲಿಯೇ ಕಂಡಕ್ಟರ್ ಆತ್ಮಹತ್ಯೆ...!

Update: 2016-10-05 11:15 IST

ಬೆಂಗಳೂರು, ಅ.5: ದಂಡ ವಿಧಿಸಿದ ಕಾರಣಕ್ಕೆ ಮನೊಂದು ಬಸ್ ನಲ್ಲಿಯೇ ಕಂಡಕ್ಟರ್ ಒಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಘಟನೆ ಕಲಬುರುಗಿಯ ಚಿಂಚೊಳ್ಳಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಬೀದರ್ ಈರಣ್ಣ ಆತ್ಮಹತ್ಯೆ ಮಾಡಿಕೊಂಡ  ಬಸ್ ಕಂಡಕ್ಟರ್. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ಡಿಪೋದಲ್ಲಿ ನಿಲ್ಲಿಸಲಾಗಿದ್ದ ಬಸ್ ನಲ್ಲೇ ಈರಣ್ಣ ಅವರು ಆತ್ಮಹತ್ಯೆ  ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಈರಣ್ಣ ಅವರು ಮೂಲತಃ ಹುಮ್ನಾಬಾದ್ ನ ಮೀನಕೇರಾದವರಾಗಿದ್ದು, ಬೀದರ್ ನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು.

ಮಂಗಳವಾರ  ಕಲಬುರಗಿ ಚಿಂಚೊಳ್ಳಿಯಲ್ಲಿ ಬಸ್ ನಿಲ್ಲಿಸಿದ್ದ  ತಪಾಸಣಾ ಅಧಿಕಾರಿಗಳು ತಪಾಸಣೆ ಮಾಡುವಾಗ ಬಸ್‌ನಲ್ಲಿದ್ದ ನಾಲ್ವರು ಪ್ರಯಾಣಿಕರ ಪೈಕಿ ಇಬ್ಬರಿಗೆ ಕಂಡಕ್ಟರ‍್ ಈರಣ್ಣನನ್ನು ಟಿಕೆಟ್‌ ನೀಡಿರಲಿಲ್ಲ. ಈ ಕಾರಣಕ್ಕಾಗಿ ಅವರು ಕಂಡಕ್ಟರ‍್ ಈರಣ್ಣನನ್ನು ತರಾಟೆಗೆ ತೆಗೆದುಕೊಂಡರು. ಸಾಲದ್ದಕ್ಕೆ ಆತನಿಗೆ ದಂಡ ವಿಧಿಸಿ, ಆತನ ವೃತ್ತಿಗೆ ತೊಂದರೆಯಾಗುವಂತೆ ಕೇಸ್ ಬರೆದು  ಹೋದರು ಎಂದು ಮೂಲಗಳು ತಿಳಿಸಿವೆ.

ಈ ಕಾರಣದಿಂದಾಗಿ  ಮನನೊಂದು ಕಂಡಕ್ಟರ್ ಈರಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ. ಚಿಂಚೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News