ಈಶ್ವರಪ್ಪಗೆ ಬಿಸಿ ಮುಟ್ಟಿಸಿದ ಬಿಜೆಪಿ ಹೈಕಮಾಂಡ್
ಬೆಳಗಾವಿ, ಅ.5: ರಾಜ್ಯ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪಗೆ ಬಿಜೆಪಿ ಹೈಕಮಾಂಡ್ ಬಿಸಿ ಮುಟ್ಟಿಸಿದೆ. ಪಕ್ಷಕ್ಕೆ ಪರ್ಯಾಯ ಶಕ್ತಿ ಹುಟ್ಟುಹಾಕುವ ಪ್ರಯತ್ನ ನಡೆಸದಂತೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್ ಈಶ್ವರಪ್ಪಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಬೆಳಗಾವಿಯ ಕಾರ್ಯಕಾರಿಣಿಯ ಸಮಾರೋಪ ಸಮಾರಂಭದ ಬಳಿಕ ಈಶ್ವರಪ್ಪರೊಂದಿಗೆ ಮಾತುಕತೆ ನಡೆಸಿದ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್, ಪಕ್ಷದ ಹಾಗೂ ರಾಜ್ಯಾಧ್ಯಕ್ಷರ ವಿರುದ್ಧ ಯಾರೂ ಮಾತನಾಡಕೂಡದು. ಪಕ್ಷಕ್ಕೆ ಪರ್ಯಾಯ ಶಕ್ತಿ ಹುಟ್ಟು ಹಾಕುವ ಪ್ರಯತ್ನ ನಡೆಸಬೇಡಿ. ರಾಯಣ್ಣ ಬ್ರಿಗೇಡ್ ಅನ್ನು ಪಕ್ಷವಿರೋಧಿ ಚಟುವಟಿಕೆ ಎಂದು ಪರಿಗಣಿಸಬೇಕಾಗುತ್ತದೆ. ರಾಜ್ಯಾಧ್ಯಕ್ಷರು ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಾಣ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಮುಂದಿನ ಚುನಾವಣೆ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿದೆ. ಯಡಿಯೂರಪ್ಪ ಮುಂದಿನ ಸಿಎಂ. ಈ ಬಗ್ಗೆ ಮಂಗಳೂರಿಗೆ ಬಂದಾಗ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸ್ಪಷ್ಟವಾಗಿ ಹೇಳಿದ್ದಾರೆ. ಯಡಿಯೂರಪ್ಪ ಸಿಎಂ ಆದ ನಂತರ ಯಾರು ಬೇಕಾದರೂ ಬಿಜೆಪಿ ರಾಜ್ಯಾಧ್ಯಕ್ಷರಾಗಬಹುದು. ನೀವೇ ನಂತರದ ರಾಜ್ಯಾಧ್ಯಕ್ಷ ರಾದರೂ ಆಶ್ಚರ್ಯವಿಲ್ಲ. ಪದಾಧಿಕಾರಿಗಳ ಪಟ್ಟಿಯಲ್ಲಿ ಇನ್ನು ಬದಲಾವಣೆ ಇಲ್ಲ. ಪಕ್ಷದ ಆಂತರಿಕ ವಿಚಾರಗಳನ್ನು ಹೊರಗೆ ಚರ್ಚೆ ಮಾಡಕೂಡದು. ಇದು ಅಮಿತ್ ಶಾ ಆಜ್ಞೆ. ಇದನ್ನು ಕಡೆಗಣಿಸಿದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.