ಚಲೋ ಉಡುಪಿ: ಕುಣಿಗಲ್ ನಲ್ಲಿ ಬಹಿರಂಗ ಸಭೆ
ಕುಣಿಗಲ್, ಅ.5: ನೆಲಮಂಗಲದಿಂದ ಹೊರಟು ಕುಣಿಗಲ್ ತಲುಪಿದ ಸ್ವಾಭಿಮಾನಿ ಸಂಘರ್ಷ ಜಾಥಾವನ್ನು ನಗರದ ಪ್ರವಾಸಿ ಮಂದಿರದ ಬಳಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ನಂತರ ಸ್ಥಳೀಯ ಕಲಾತಂಡಗಳ ಜೊತೆ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಸಿ ಜೈ ಭೀಮ್ ಘೋಷಣೆಗಳ್ನು ಮೊಳಗಿಸಲಾಯಿತು.
ನಂತರ ಕುಣಿಗಲ್ ನ ಬಿ.ಎಂ ರಸ್ತೆಯಲ್ಲಿ ಬಹಿರಂಗ ಸಭೆ ನಡೆಯಿತು.
ಕೋರ್ ಟೀಂನ ಸದಸ್ಯೆ ಅಖಿಲಾ ವಿದ್ಯಾಸಂದ್ರ ಪ್ರಾಸ್ತಾವಿಕ ಮಾತನ್ನಾಡಿ, ದಾದ್ರಿಯಿಂದ ಹಿಡಿದು ಗುಜರಾತ್, ಕೊಪ್ಪ ಚಿಕ್ಕಮಗಳೂರು, ಉಡುಪಿಯಲ್ಲಿಯೂ ಆಹಾರದ ವಿಷಯವಾಗಿ ದೌರ್ಜನ್ಯಗಳಿ ನಡೆಯುತ್ತಿರುವುದು ದುರಂತ, ಊಟ ತನ್ನಿಚ್ಛೆ, ನೋಟ ಪರರಿಚ್ಛೆ ಅಂತ ಗಾದೆ ಇತ್ತು. ಆದರೆ ಇಂದು ಕೋಮುವಾದಿಗಳು ನಮ್ಮ ಊಟದ ತಟ್ಟೆಗೆ ಒದೆಯುವ ಧಾರ್ಷ್ಟ್ಯ ತೋರುತ್ತಿದ್ದಾರೆ. ಇವರು ಎಲ್ಲವನ್ನು ದೇವರಿಗೆ ಹೋಲಿಸುತ್ತಿದ್ದಾರೆ. ದನದೊಳಗೂ ದೇವರಿದ್ದಾನೆ ಅನ್ನುತ್ತಿದ್ದಾರೆ. ಆದರೆ ದನವನ್ನು ದೇವರೆ ಕಾಪಾಡುತ್ತಾನೆ ತಾವು ಸುಮ್ಮನಿದ್ದರೆ ಸರಿ ಎಂದು ಎಚ್ಚರಿಸಿದರು. ನಮ್ಮ ಆಹಾರ ನಮ್ಮ ಆಯ್ಕೆ, ನಮ್ಮ ಭೂಮಿ ನಮ್ಮ ಹಕ್ಕು ಹೆಸರಿನಲ್ಲಿ ಜಾಥಾ ನಡೆಸುತ್ತಿದ್ದೇವೆ ಎಂದು ಹೇಳಿದರು.
ತಮಟೆ ಬಡಿಯುವ ಮೂಲಕ ಉದ್ಘಾಟಿಸಿದ ಸಿದ್ಧಗಂಗಾ ಕಬೀರಾನಂದ ಸ್ವಾಮೀಜಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಎಲ್ಲಾ ಮಹಾತ್ಮರನ್ನು ಸ್ಮರಿಸಬೇಕು. ಬಹಳಷ್ಟು ಜನ ಮೌಢ್ಯಕ್ಕಾಗಿ ಉಡುಪಿಗೆ ಹೋಗುತ್ತಾರೆ. ಆದರೆ ನೀವು ಆ ಮೌಢ್ಯ ತೊರೆಯಲು ಉಡುಪಿಗೆ ಹೋಗುತ್ತಿದ್ದೀರಿ ನಿಮಗೆ ಶರಣು ಶರಣಾರ್ಥಿ ಎಂದರು.
ಆಕಳಲ್ಲಿ ದೇವರಿದ್ದಾರೆ ಎನ್ನುವ ನೀವು ಎಮ್ಮೆ ಹಾಲು ಯಾಕೆ ಕುಡಿಯುತ್ತೀರಿ ಎಂದು ಪ್ರಶ್ನೆ ಮಾಡಿದ ಅವರು ದಲಿತರನ್ನು ತುಳಿಯುವ ಹುನ್ನಾರವನ್ನು ಪಟ್ಟಭದ್ರ ಹಿತಾಶಕ್ತಿಗಳು ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು. ಪಂಚಾಂಗದಿಂದ ದೇಶ ಅಧೋಗತಿ ತಲುಪಿದೆ. ಮತ್ತೆ ಪಂಚಾಂಗ ತರಲು ಕೆಲವು ಹುನ್ನಾರ ಮಾಡುತ್ತಿದ್ದಾರೆ ಅದನ್ನು ವಿರೋಧಿಸಿ ನಾವು ಅಂಬೇಡ್ಕರ್ ಬರೆದ ಸಂವಿಧಾನವನ್ನು ಮಾತ್ರ ನಾವು ಅನುಸರಿಸಬೇಕು ಎಂದರು. ಬುದ್ಧರ ಬಸವಣ್ಣನವರ ವಿಚಾರಗಳು ಸಂವಿಧಾನದಲ್ಲಿವೆ ಎಂದ ಅವರು
ಇಂದು ಬಸವಣ್ಣನವರ ಹೆಸರಿನಲ್ಲಿ ಕೆಲವು ಡೋಂಗಿಗಳು ಮೋಸ ಮಾಡಿ ಬಸವರ ನೈಜ ವಿಚಾರಗಳನ್ನು ಮರೆ ಮಾಚುತ್ತಿದ್ದಾರೆ ಇದರ ಬಗ್ಗೆ ನಾವು ಜಾಗೃತಗೊಳ್ಳಬೇಕು ಎಂದರು. ಇಂದು ನಾವು ಬರಿ ಅಂಬೇಡ್ಕರ್ ಫೋಟೊ ಹಿಡಿದು ಜೈ ಅಂದುಬಿಟ್ಟರೆ ಪ್ರಯೋಜನವಿಲ್ಲ, ಕೇವಲ ಅಂಬೇಡ್ಕರ್ ಮೂರ್ತಿ ಸ್ಥಾಪಿಸಿ ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ನಾವು ಅಂಬೇಡ್ಕರ್ ರನ್ನು ಚೆನ್ನಾಗಿ ಓದಿಕೊಂಡು ನಮ್ಮ ಹಕ್ಕುಗಳಿಗೆ, ನಮ್ಮ ಸ್ವಾತಂತ್ರ್ಯಕ್ಕಾಗಿ ಪ್ರಾಮಾಣಿಕವಾಗಿ ಹೋರಾಡಬೇಕು ಎಂದರು.
ಮಿರ್ಜಾ ಗಾಲೀಬ್ ಹೇಳುವಂತೆ ಗುಡಿ ಕಟ್ಟಿಸಿ ರಾತ್ರಿ ಹೊತ್ತು ಕನ್ನ ಹಾಕಿದರೆ ಅದು ಹಿಂದೂ ಧರ್ಮವಲ್ಲ, ನಮಾಜ್ ಮಾಡಿ ದರೋಡೆ ಮಾಡಿದರೆ ಮುಸ್ಲಿಂ ಧರ್ಮವಲ್ಲ, ಪೇಟ ಹಾಕಿಕೊಂಡು ಭಯೋತ್ಪಾದನೆ ಮಾಡಿದರೆ ಸಿಖ್ ಧರ್ಮವಲ್ಲ, ಶಿಲುಬರ ಹಾಕಿಕೊಂಡು ಲೂಟಿ ಮಾಡಿದರೆ ಕ್ರೈಸ್ತ ಧರ್ಮವಲ್ಲ, ಜಾತಿ ಮತ ಬಿಟ್ಟು ಮನುಷ್ಯ ಮನುಷ್ಯನನ್ನು ಅಪ್ಪುಕೊಳ್ಳುವುದೇ ನಿಜವಾದ ಧರ್ಮ ಆಗಿದೆ. ಅಂತಹ ಧರ್ಮ ನಮ್ಮದಾಗಲಿ ಭಾರತದ ನಾವೆಲ್ಲರೂ ಸಹೋದರರು ಎಂದು ಭಾವಿಸೋಣ ಎಂದರು.
ತಮ್ಮೊಳಗಿರುವ ನೋವನ್ನು ಹೊರಹಾಕಲು ಜಾಥಾದಲ್ಲಿ ಭಾಗವಹಿಸುತ್ತಿರುವ ನಿಮಗೆ ಯಶಸ್ವಿ ಸಿಗಲಿ ಎಂದು ಹಾರೈಸಿದರು. ನಂತರ ಅನೇಕ ಮುಖಂಡರು ಮಾತನ್ನಾಡಿ ಉಡುಪಿ ಚಲೋ ಗೆ ಬೆಂಬಲ ಸೂಚಿಸಿದರು.
ಡಾ.ಕೆ. ಶರೀಫ್, ಕೆ.ದೊರೈರಾಜ್, ಎನ್ ವೆಂಕಟೇಶ್, ಡಾ. ಅರುಣ್ ಜೋಳದಕೂಡ್ಲಗಿ, ಸೈಯದ್ ಮುಜೀಬ್, ರಾಜಶೇಖರ್ ಮೂರ್ತಿ, ಅನಂತ್ ನಾಯಕ್, ಆಯುಷ್ ಅಬಿ ಮತ್ತಿತರರು ಭಾಗವಹಿಸಿದ್ದರು.