×
Ad

ನಾವು ಒಡೆದಷ್ಟು ಮನುವಾದಿಗಳು ಖುಷಿ ಪಡುತ್ತಾರೆ: ಮಲ್ಲಿಗೆ

Update: 2016-10-05 21:05 IST

ನಾನು ಮಣ್ಣನಡಿ ಬಿದ್ದೆನೆಂದು ಬೀಗಬೇಡ, ಮೊದಲ ಮಳೆ ಬಿದ್ದೊಡನೆ ತಲೆ ಎತ್ತುವ ಬೀಜ ನಾನು ಎಂದು ರೋಹಿತ್ ವೇಮುಲಾರವರು ಹೇಳಿದ್ದಾರೆ. ಆ ಸ್ಫೂರ್ತಿ ನಮಗಿರಲಿ.

ಇತ್ತೀಚಿನ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ, ದನಗಳ ಹೆಸರಿನಲ್ಲಿ ನಡೆಯುತ್ತಿರುವ ಈ ಗಲಭೆ ದಳ್ಳೂರಿಗಳ ನಡುವೆ ನಾವು ಗಮನಿಸಬೇಕಾದ್ದು ಏನೆಂದರೆ ಗುಜರಾತ್ ನಲ್ಲಾಗಲಿ ಕರ್ನಾಟಕದ ಕರಾವಳಿಯಲ್ಲಾಗಲಿ, ನಮ್ಮ ಸಹೋದರರ ಕೈಯಲ್ಲೇ ನಮ್ಮನ್ನೇ ಹೊಡೆಸುವುದು ಬಿಡಿಸುವುದು ನಡೆಯುತ್ತಿದೆ. ನಮ್ಮನ್ನು ಒಡೆದು ಆಳುತ್ತಿದ್ದಾರೆ. ಇದಕ್ಕೆ ಇನ್ನು ಮುಂದೆ ನಾವು ಅವಕಾಶ ಕೊಡುವುದಿಲ್ಲ ಎಂದು ಉಡುಪಿ ಚಲೋ ಮೂಲಕ ಸಾರಿ ಹೇಳಲಿದ್ದೇವೆ ಎಂದು ಕರ್ನಾಟಕ ಜನಶಕ್ತಿಯ ಮಲ್ಲಿಗೆ ಹೇಳಿದರು.

ಅವರು ಹೊಳೆನರಸಿಪುರದಲ್ಲಿ ಚಲೋ ಉಡುಪಿ ಜಾಥಾದ ವೇದಿಕೆಯಲ್ಲಿ ಮಾತಾಡುತ್ತಿದ್ದರು. 

ಕರ್ನಾಟಕದಲ್ಲಿ ಚಳವಳಿಗೆ, ಬದಲಾವಣೆಗೆ ಮೂಲತಾಯಿ ದಸಸಂ ಆಗಿದೆ. ಆದರೆ ದಸಸಂ ಇಂದು ಹಲವು ವಿಭಾಗಗಳಾಗಿ ಒಡೆದುಹೋಗಿದೆ. ನಾವು ಒಡೆದಷ್ಟು ಮನುವಾದಿಗಳು ಖುಷಿ ಪಡುತ್ತಾರೆ. ಈ ವೇದಿಕೆಯಲ್ಲಿ ಬಹಳಷ್ಟು ಸಂಘಟನೆಯ ಮುಖಂಡರು ಇದ್ದಾರೆ. ನಾವೆಲ್ಲರೂ ಬೇರೆ ಬೇರೆ ಸಂಘಟನೆಯವರಾದರೂ ನಮ್ಮೆಲ್ಲರ ಆಶಯ ಬಾಬಾ ಸಾಹೇಬರ ಆಶಯಗಳೆ ಆಗಿವೆ. ನೀಲಿ  ಬಾವುಟದಡಿ ನಾವೆಲ್ಲರೂ ಒಂದಾಗಿದ್ದೇವೆ. ಉಡುಪಿ ಚಲೋ ನಮ್ಮೆಲ್ಲರನ್ನೂ ಒಂದುಗೂಡಿಸಿದೆ. ಬ್ರಾಹ್ಮಣ್ಯ ವಿರೋಧಿಸುವ ಹೋರಾಟ ನಮ್ಮದು.

ನಮ್ಮ ಹಕ್ಕು, ಬದುಕು ಮತ್ತು ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ನಾವು ಸುಮ್ಮನಿರುವುದಿಲ್ಲ ಎಂದು ತೋರಿಸಲು ಸಂಘಪರಿವಾರಕ್ಕೆ ಬುದ್ಧಿ ಕಲಿಸಲು ಉಡುಪಿ ಚಲೋ ನಡೆಯುತ್ತಿದೆ. ಈ ಹೋರಾಟ ಇಲ್ಲಿಗೆ ನಿಲ್ಲದೇ ಉಡುಪಿ ಚಲೋ ಕಾರ್ಯಕ್ರಮ ಮುಗಿದ ನಂತರವೂ  ಮುಂದುವರೆಸೋಣ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor