×
Ad

ಅ.9ರಂದು ‘ಚಲೋ ಉಡುಪಿ’ ಸಮಾರೋಪ ಸಮಾವೇಶ

Update: 2016-10-05 21:13 IST

ಉಡುಪಿ, ಅ.5: ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ಚಲೋ ಉಡುಪಿ’ ಸ್ವಾಭಿಮಾನಿ ಸಂಘರ್ಷ ಜಾಥವು ಅ.8ರಂದು ಉಡುಪಿಗೆ ಆಗಮಿಸಲಿದ್ದು, ಅ.9ರಂದು ಮಧ್ಯಾಹ್ನ ಒಂದು ಗಂಟೆಗೆ ಉಡುಪಿ ಬೀಡಿನಗುಡ್ಡೆಯ ಮಹಾತ್ಮ ಗಾಂಧಿ ಬಯಲು ರಂಗಮಂದಿರದಲ್ಲಿ ಸಮಾರೋಪ ಸಮಾವೇಶ ನಡೆಯಲಿದೆ.

ಆದಿಉಡುಪಿ ಅಂಬೇಡ್ಕರ್ ಭವನದಲ್ಲಿಂದು ಕರೆಯಲಾದ ಸುದ್ದಿಗೋಷ್ಠಿ ಯಲ್ಲಿ ಉಡುಪಿ ಜಾಥ ಸ್ವಾಗತ ಸಮಿತಿಯ ಅಧ್ಯಕ್ಷ ಸುಂದರ ಮಾಸ್ತರ್, ಪ್ರಧಾನ ಸಂಚಾಲಕ ಶ್ಯಾಮರಾಜ ಬಿರ್ತಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್ ಈ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಚಲೋ ಉಡುಪಿಯ ಪೋಸ್ಟರನ್ನು ಬಿಡುಗಡೆಗೊಳಿಸಲಾಯಿತು.

ಸಮಾರೋಪದ ಪೂರ್ವಭಾವಿಯಾಗಿ ಬೆಳಗ್ಗೆ 11ಗಂಟೆಗೆ ಅಜ್ಜರಕಾಡಿನ ಹುತಾತ್ಮ ಸ್ಮಾರಕ ಆವರಣದಿಂದ ಮೆರವಣಿಗೆ ಹೊರಟು ಜೋಡುಕಟ್ಟೆ, ಕೆಎಂ ಮಾರ್ಗ, ಕ್ಲಾಕ್ ಟವರ್, ಬಿಎಸ್‌ಎನ್‌ಎಲ್ ಕಚೇರಿ ಮಾರ್ಗ, ಮೆಸ್ಕಾಂ ಮಾರ್ಗ, ಡಯಾನ ಸರ್ಕಲ್, ಪಿಪಿಸಿ ರಸ್ತೆ, ವಳಕಾಡು ಶಾಲಾ ಮಾರ್ಗ ವಾಗಿ ಬೀಡಿನಗುಡ್ಡೆ ತಲುಪಲಿದೆ. ಮೆರವಣಿಗೆಗೆ ಕೂಡಲಸಂಗಮದ ಶ್ರೀಜಯಮೃತ್ಯುಂಜಯ ಸ್ವಾಮೀಜಿ ಚಾಲನೆ ನೀಡಲಿರುವರು.

ಈ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಗುಜರಾತಿನ ಯುವ ನಾಯಕ ಹಾಗೂ ಉನಾ ಚಲೋ ಜಾಥದ ಮುಖ್ಯ ಸಂಘಟಕ ಜಿಗ್ನೇಶ್ ಮೆವಾನಿ, ದಿನೇಶ್ ಅಮಿನ್ ಮಟ್ಟು, ಸಿ.ಎಸ್.ದ್ವಾರಕನಾಥ್, ಭಾಸ್ಕರ್ ಪ್ರಸಾದ್, ವಿಕಾಸ್ ವೌರ್ಯ, ಹುಲಿಕುಂಟೆ ಮೂರ್ತಿ, ಅನಂತ ನಾಯ್ಕಾ ಮೊದಲಾದ ವರು ಭಾಗವಹಿಸಲಿದ್ದಾರೆ.

ಸಮಾವೇಶದಲ್ಲಿ 7-10ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಹೊಂದ ಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಜನ ಆಗಮಿಸಲಿದ್ದು, ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಸಮಾವೇಶದ ಬಳಿಕ ಸಂಜೆ 7ಗಂಟೆಯ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. 8ರಂದು ಉಡುಪಿಗೆ ಆಗಮಿಸುವ ಜಾಥವು ಇತ್ತೀಚೆಗೆ ಗೋವಿನ ಹೆಸರಿನಲ್ಲಿ ಹತ್ಯೆಯಾದ ಕೆಂಜೂರಿನ ಪ್ರವೀಣ್ ಪೂಜಾರಿ ಮನೆಗೆ ಸಾಗಲಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡರಾದ ಸುಂದರ ಕಪ್ಪೆಟ್ಟು, ವಿಠಲ ತೊಟ್ಟಂ, ಪರಮೇಶ್ವರ ಉಪ್ಪೂರು, ಎಸ್.ಎಸ್.ಪ್ರಸಾದ್, ಪ್ರಶಾಂತ್ ತೊಟ್ಟಂ, ಸಮತಾ ಸೈನಿಕ ದಳದ ವಿಶ್ವನಾಥ ಪೇತ್ರಿ, ಮುಸ್ಲಿಮ್ ಒಕ್ಕೂಟದ ಸಲಾವುದ್ದೀನ್ ಅಬ್ದುಲ್ಲಾ, ಕ್ರೈಸ್ತ ಒಕ್ಕೂಟದ ಪ್ರೊ.ನೇರಿ ಕರ್ನೆಲಿಯೊ, ವೆಲೇರಿಯನ್ ಫೆರ್ನಾಂಡಿಸ್, ಅಲ್ಪಸಂಖ್ಯಾತರ ವೇದಿಕೆಯ ಖಲೀಲ್ ಅಹ್ಮದ್, ಬೌದ್ಧ ಮಹಾಸಭಾದ ಶಂಭು ಸುವರ್ಣ, ಸಿಪಿಎಂನ ಬಾಲಕೃಷ್ಣ ಶೆಟ್ಟಿ, ಮಾಲಿಂಗ ಕೋಟ್ಯಾನ್, ಆಮ್ ಆದ್ಮಿ ಪಕ್ಷದ ಶಾಂತಲಾ ದಾಮ್ಲೆ, ಶಶಿಧರ್ ಹೆಮ್ಮಾಡಿ, ಫಾ.ವಿಲಿಯಂ ಮಾರ್ಟಿಸ್, ಪ್ರೊ.ಕೆ.ಫಣಿರಾಜ್, ದಿನಕರ ಬೆಂಗ್ರೆ ಉಪಸ್ಥಿತರಿದ್ದರು.

ಜಾತಿ ಪೂರ್ವಾಗ್ರಹ -ಹಿಂದುತ್ವದ ಹಿಂಸೆ

ದಲಿತರ ಮೇಲೆ ನಡೆಯುತ್ತಿರುವ ಹಲ್ಲೆಯ ಹಿಂದೆ ಜಾತಿ ಪೂರ್ವಾಗ್ರಹ ಹಾಗೂ ಆಧುನಿಕ ಹಿಂದುತ್ವದ ಹಿಂಸೆಯ ಮಿಶ್ರಣ ಇದೆ. ಇದರ ವಿರುದ್ಧ ನಡೆದ ಉನಾ ಚಲೋ ಹೋರಾಟ ಹೊಸ ಅಲೆ ಎಬ್ಬಿಸಿದೆ. ಇದುವೇ ನಮಗೆ ಸ್ಪೂರ್ತಿ ಹಾಗೂ ಮಾದರಿಯಾಗಿದೆ ಎಂದು ಚಿಂತಕ ಜಿ.ರಾಜಶೇಖರ್ ಹೇಳಿದರು.

ಕರ್ನಾಟಕದಲ್ಲಿಯೂ ಆಹಾರ ವಿಚಾರವಾಗಿ ಹಿಂಸೆಗಳು ನಡೆದಿವೆ. ಉಡುಪಿಯಲ್ಲಿ ನಡೆದ ಬೆತ್ತಲೆ ಪ್ರಕರಣ, ಕೃಷ್ಣಯ್ಯ ಪಾಟಾಳಿ ಹತ್ಯೆ ಹಾಗೂ ಇತ್ತೀಚೆಗೆ ನಡೆದ ಪ್ರವೀಣ್ ಪೂಜಾರಿ ಕೊಲೆ ನೋಡಿದರೆ ಉಡುಪಿಯೂ ಹಿಂಸೆಯ ಕೇಂದ್ರವಾಗಿ ಬೆಳೆಯುತ್ತಿರುವುದು ಕಂಡುಬರುತ್ತದೆ. ಇದು ರಾಜ ಕೀಯ ಪಕ್ಷವೊಂದರ ಬೆಳವಣಿಗೆಯ ಕೊಡುಗೆಯಾಗಿದೆ. ಇದರ ವಿರುದ್ಧ ನಮ್ಮ ಪ್ರತಿಭಟನೆಯಾಗಿದೆ ಎಂದರು.

ಪ್ರವೀಣ್ ಹತ್ಯೆಯು ಮಾಮೂಲಿ ಕ್ರಿಮಿನಲ್ ಕೃತ್ಯ ಮಾತ್ರ ಅಲ್ಲ. ಅದು ರಾಜಕೀಯ ಸಿದ್ಧಾಂತದ ಹೆಸರಿನಲ್ಲಿ ನಡೆದ ಕೊಲೆ. ಈ ಕುಟುಂಬಕ್ಕೆ ಕೇವಲ ಪರಿಹಾರ ಸಾಂತ್ವನ ನೀಡಿದರೆ ಸಾಲದು. ಇದರ ಹಿಂದೆ ಇರುವ ರಾಜಕೀಯವನ್ನು ಜನರಿಗೆ ತಿಳಿಹೇಳುವ ಕಾರ್ಯ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor