ಕಾಲಮಿತಿಯೊಳಗೆ ಅನುದಾನ ಸದ್ಬಳಕೆ ಮಾಡಿ: ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.
ಶಿವಮೊಗ್ಗ, ಅ.5: ಕ್ರಿಯಾಯೋಜನೆ ರೂಪಿಸಿ ಕಾಲಮಿತಿಯಲ್ಲಿ ಅನುದಾನ ಸದ್ಭಳಕೆ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಅನುದಾನ ವಾಪಸ್ ಹೋಗದಂತೆ ಎಚ್ಚರವಹಿಸಿ. ಈ ನಿಟ್ಟಿನಲ್ಲಿ ಗೊಂದಲಕ್ಕೆ ಆಸ್ಪದವಾಗದ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಿ ಎಂದು ಜಿಪಂ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬುಧವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಕೊಡಚಾದ್ರಿ ಸಭಾಂಗಣದಲ್ಲಿ ನಡೆದ ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ಥಾಯಿ ಸಮಿತಿಯ ಸದಸ್ಯ ಕಲಗೋಡು ರತ್ನಾಕರ್, ಎಚ್.ಸಿ.ಯೋಗೇಶ್, ಕೆ.ಇ.ಕಾಂತೇಶ್‌ರವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಫೆಬ್ರವರಿ ಅಂತ್ಯದೊಳಗೆ ಯೋಜನೆಗಳಿಗೆ ಮೀಸಲಿಟ್ಟ ಅನುದಾನ ವೆಚ್ಚ ಮಾಡಿ. ಅನುದಾನ ಬಳಕೆಯಾಗದೆ ವಾಪಸ್ ಹೋಗದಂತೆ ಕಾರ್ಯನಿರ್ವಹಣೆ ಮಾಡಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ಹಿಂದಿನಂತೆಯೇ ಇರಲಿ: ಸಭೆೆಯಲ್ಲಿ ಭಾಗವಹಿಸಿದ್ದ ಜಿಪಂ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಮಾತನಾಡಿ, ಇತ್ತೀಚೆಗೆ ಸರಕಾರದಿಂದ ಪತ್ರವೊಂದು ಬಂದಿದ್ದು ಈ ಪ್ರಕಾರ ಜಿಪಂ ವ್ಯಾಪ್ತಿಯ ರಸ್ತೆಗಳು 3 ಮೀ.ಗಿಂತ ಹೆಚ್ಚು ಇರದಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಕಲಗೋಡು ರತ್ನಾಕರ್, ಎಚ್.ಸಿ.ಯೋಗೇಶ್ ಮಾತನಾಡಿ, ರಸ್ತೆಗಳು ಕಿರಿದಾದರೆ ಅಪಘಾತ ಸಂಭವಿಸುವ ಸಾಧ್ಯತೆಯಿರುತ್ತದೆ. 3 ಮೀ. ರಸ್ತೆ ಬೇಡ. 3.75 ಮೀ. ರಸ್ತೆಯೇ ಇರಲಿ ಎಂಬ ನಿರ್ಧಾರ ಮಾಡೋಣ. ಇದನ್ನು ಸರಕಾರಕ್ಕೆ ಕಳುಹಿಸಿಕೊಡೋಣ ಎಂದು ಹೇಳಿದರು. ಇದಕ್ಕೆ ಅಧ್ಯಕ್ಷೆ ಹಾಗೂ ಸಮಿತಿಯ ಸದಸ್ಯರು ಸಹಮತ ವ್ಯಕ್ತಪಡಿಸಿದರು. ಮಾಹಿತಿ ಕೊಡಿ:
ಈ ಹಿಂದಿನ ಸ್ಥಾಯಿ ಸಮಿತಿ ಸಭೆೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ಕೊಡುವುದರ ಜೊತೆಗೆ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ. ಪ್ರಸ್ತುತ ಸಭೆಯಲ್ಲಿ ಚರ್ಚೆಯಾಗುವ ಸಮಸ್ಯೆ, ವಿಷಯಗಳ ಬಗ್ಗೆಯೂ ವಿಳಂಬಕ್ಕೆ ಆಸ್ಪದವಾಗದಂತೆ ಪರಿಹಾರ ಕ್ರಮಗಳನ್ನು ಕೈಗೊಳ್ಳಿ ಎಂದು ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್‌ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಚರ್ಚೆ:
ಸಭೆೆಯಲ್ಲಿ ಜಿಲ್ಲೆಯಲ್ಲಿರುವ ಶಾಲಾ ಮಕ್ಕಳ ಆರೋಗ್ಯ ತಪಾಸಣೆ, ಅಂಗನವಾಡಿಗಳಿಗೆ ಸ್ವಂತ ಕಟ್ಟಡ, ಶಾಲಾ ಕಟ್ಟಡಗಳಿಗೆ ಕಾಂಪೌಂಡ್ ನಿರ್ಮಾಣ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿಯ ಸದಸ್ಯರಾದ ಅಪೂರ್ವ ಶರಧಿ ಪೂರ್ಣೇಶ್, ರಾಜಶೇಖರ ಗಾಳೀಪುರ ಮತ್ತಿತರರು ಉಪಸ್ಥಿತರಿದ್ದರು.