×
Ad

ಮೇಯರ್, ಆಯುಕ್ತೆಯಿಂದ ಮಾದಿಗ ಸಮುದಾಯಕ್ಕೆ ಅಪಮಾನ: ಪ್ರತಿಭಟನೆ

Update: 2016-10-05 22:00 IST

 ಶಿವಮೊಗ್ಗ, ಅ.5: ಇಲ್ಲಿನ ಮಹಾನಗರ ಪಾಲಿಕೆ ಮೇಯರ್ ಎಸ್.ಕೆ. ಮರಿಯಪ್ಪ ಹಾಗೂ ಆಯುಕ್ತೆ ತುಷಾರಮಣಿ ಅವರು ಮಾದಿಗ ಸಮುದಾಯವನ್ನು ಅಗೌರವಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ರಾಜ್ಯ ಗುತ್ತಿಗೆ ಪೌರಕಾರ್ಮಿಕರ ಸಂಘವು ಬುಧವಾರ ನಗರದ ಪಾಲಿಕೆ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿತು. ಅಪಮಾನ: ಪಾಲಿಕೆಯಲ್ಲಿ ಸುಮಾರು 20 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ ಕಳೆದ 2 ತಿಂಗಳಿನಿಂದ ಇವರಿಗೆ ವೇತನ ಪಾವತಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸಂಘಟನೆಯ ಮುಖಂಡ ಬಾನುಪ್ರಸಾದ್ ಮತ್ತು ಗುತ್ತಿಗೆ ಕಾರ್ಮಿಕರು ಆಯುಕ್ತೆ ಮತ್ತು ಮೇಯರ್ ಬಳಿ ಮಂಗಳವಾರ ತೆರಳಿ ಅಹವಾಲು ಸಲ್ಲಿಸಲು ಮುಂದಾದರು. ಆಯುಕ್ತರ ಕೊಠಡಿಗೆ ಸಮಿತಿಯ ಮುಖಂಡರು ತೆರಳಿದಾಗ ಆಯುಕ್ತರು ನಿಂದಿಸಿದ್ದಾರೆ. ಮೇಯರ್ ಆಯುಕ್ತರ ಪರವಾಗಿ ನಿಂತು, ನಿಮಗೆ ವೇತನ ನೀಡಲು ಆಗುವುದಿಲ್ಲ. ನಾಳೆಯಿಂದ ಕೆಲಸ ನಿಲ್ಲಿಸುತ್ತೇವೆ. ಏನು ಬೇಕಾದರೂ ಮಾಡಿಕೊಳ್ಳಿ ಎಂದು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಹೊರಕಳುಹಿಸಿದ್ದಾರೆ ಎಂದು ಪ್ರತಿಭಟನಾಕಾರರುದೂರಿದ್ದಾರೆ. ಸಮಿತಿಯ ರಾಜ್ಯ ವಿಭಾಗೀಯ ಕಾರ್ಯದರ್ಶಿ ಬಾನುಪ್ರಸಾದ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿರುವುದರಿಂದ ಮಾದಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಕೂಡಲೇ ಆಯುಕ್ತೆ ತುಷಾರಮಣಿ ಹಾಗೂ ಮೇಯರ್ ಮರಿಯಪ್ಪ ಅವರನ್ನು ಅವರ ಹುದ್ದೆಗಳಿಂದ ವಜಾಗೊಳಿಸಬೇಕು. ಅವರಿಬ್ಬರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆ ಯಡಿಯಲ್ಲಿ ಪೊಲೀಸರು ದೂರು ದಾಖಲಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಕೂಡಲೇ ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ನೀಡಬೇಕಾದ ಎರಡು ತಿಂಗಳ ಬಾಕಿ ವೇತನ ಬಿಡುಗಡೆ ಮಾಡಬೇಕು. ಕೆಲಸದಲ್ಲಿ ಮುಂದುವರಿಸುವುದರ ಜೊತೆಗೆ ಖಾಯಂಗೊಳಿಸಬೇಕು. ಒಂದು ವೇಳೆ ನಿರ್ಲಕ್ಷ ತೋರಿದರೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪ್ರಮುಖರಾದ ಬಿ.ಎ.ಭಾನುಪ್ರಸಾದ್, ಆರ್. ರಂಗಪ್ಪ, ಕೆ. ಕುಮಾರ್, ಗಂಗಾಧರ್, ತೇಜಸ್, ವೆಂಕಟೇಶ್ ಮತ್ತಿತರರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News