ಶಾಶ್ವತ ಪರಿಹಾರಕ್ಕೆ ಸಮಿತಿ ರಚನೆ: ತೀರ್ಮಾನ
ಮೂಡಿಗೆರೆ, ಅ.5: ಕಳೆದ ಮೂರು ದಿನಗಳಿಂದ ತ್ರಿಪುರ ಮತ್ತು ಬೆಟ್ಟಗೆರೆ ಗ್ರಾಪಂಗಳ ನಡುವೆ ಕುಡಿಯುವ ನೀರಿನ ಬಗ್ಗೆ ಉಂಟಾದ ಗದ್ದಲದ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬುಧವಾರ ತಾಪಂ ಸಭಾಂಗಣದಲ್ಲಿ ಶಾಸಕ ಬಿ.ಬಿ. ನಿಂಗಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಕೋಗಿಲೆ ಗ್ರಾಮದ ಎಡ ಮತ್ತು ಬಲ ಭಾಗಗಳಲ್ಲಿ ಎರಡು ನೈಸರ್ಗಿಕ ನೀರಿನ ಜಲ ಮೂಲಗಳಿದ್ದು, ಎಡ ಭಾಗದ ಜಲ ಮೂಲದ ನೀರನ್ನು ತ್ರಿಪುರ ಗ್ರಾಮದವರು ಬಳಕೆ ಮಾಡಿಕೊಂಡು ಬರುತ್ತಿದೆ. ಬಲ ಭಾಗದ ಜಲ ಮೂಲದ ನೀರನ್ನು ಬೆಟ್ಟಗೆರೆ ಗ್ರಾಮಕ್ಕೆ ಕುಡಿಯಲು ಬಳಕೆ ಮಾಡಿಕೊಳ್ಳಲು 2013-14ರಲ್ಲಿ ಸರಕಾರದಿಂದ ಅನುದಾನ ಮಂಜೂರಾಗಿದೆ. ಅದರಂತೆ ಈ ವರ್ಷ ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು. ಕೋಗಿಲೆ ಗ್ರಾಮದ ಎಡ ಭಾಗದಲ್ಲಿ ಹರಿಯುವ ಜಲ ಮೂಲದಿಂದ ನೀರು ಕಡಿಮೆಯಾಗಿದೆ ಎಂಬ ಕಾರಣಕ್ಕೆ ಬಲ ಭಾಗದ ಜಲ ಮೂಲಕ್ಕೆ ತ್ರಿಪುರ ಗ್ರಾಮದವರು ತಾತ್ಕಾಲಿಕವಾಗಿ ಪೈಪ್ ಅಳವಡಿಸಿಕೊಳ್ಳಲಾಗಿತ್ತು ಎಂದು ಮಾಹಿತಿ ನೀಡಿದರು.
ಬೆಟ್ಟಗೆರೆ ಗ್ರಾಮಕ್ಕೆ ನೀರು ಪೂರೈಕೆ ಮಾಡಿದರೆ ತ್ರಿಪುರ ಗ್ರಾಮಕ್ಕೆ ನೀರಿನ ಕೊರತೆಯುಂಟಾಗುತ್ತದೆ ಎಂಬ ಕಾರಣಕ್ಕೆ ಬೆಟ್ಟಗೆರೆ ಗ್ರಾಮಕ್ಕೆ ನಡೆಯುತ್ತಿರುವ ಕಾಮಗಾರಿಗೆ ತ್ರಿಪುರ ಗ್ರಾಮಸ್ಥರು ತಡೆ ಹಾಕಿ ಪೈಪು ಕಿತ್ತು ಹಾಕಿದ್ದರು. ಈ ಕಾರಣದಿಂದಾಗಿ ಬೆಟ್ಟಗೆರೆ ಗ್ರಾಮಸ್ಥರು ತ್ರಿಪುರ ಗ್ರಾಮಕ್ಕೆ ಸಾಗುವ ಮಾರ್ಗದ ರಸ್ತೆಯಲ್ಲಿ ಗುಂಡಿ ತೋಡುವುದರ ಮೂಲಕ ಪ್ರತಿಭಟನೆ ನಡೆಸಿದ್ದು, ಒಂದು ವಾರದೊಳಗೆ ಸಮಸ್ಯೆ ಸರಿಪಡಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ಶಾಸಕ ಬಿ.ಬಿ.ನಿಂಗಯ್ಯ ತಾಪಂ ಸಭಾಂಗಣದಲ್ಲಿ ತ್ರಿಪುರ ಮತ್ತು ಬೆಟ್ಟಗೆರೆ ಗ್ರಾಪಂ ಅಧ್ಯಕ್ಷರು, ಸದಸ್ಯರು ಸೇರಿದಂತೆ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಹಾಜರಿದ್ದ ತಾಪಂ.ಅಧ್ಯಕ್ಷ ಕೆ.ಸಿ. ರತನ್, ಸದಸ್ಯರಾದ ರಂಜನ್ ಅಜಿತ್ ಕುಮಾರ್, ದೇವರಾಜು ಇವರುಗಳು ಈ ಬಗ್ಗೆ ಕಮಿಟಿ ರಚನೆ ಮಾಡಿ ಎರಡೂ ಜಲ ಮೂಲಗಳ ನೀರಿನ ಲಭ್ಯತೆಗಳನ್ನು ಪರಿಶೀಲಿಸಿ ಎರಡೂ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ಬಗ್ಗೆ ಸಲಹೆ ನೀಡಿದರು.
ಈ ವೇಳೆ ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಎಲ್ಲರ ತೀರ್ಮಾನದಂತೆ ಕಮಿಟಿ ರಚನೆ ಮಾಡಿ, ಎರಡೂ ಗ್ರಾಪಂಗಳ ಅಧ್ಯಕ್ಷರು, ಸದಸ್ಯರು ಸೇರಿದಂತೆ ಬೆಟ್ಟಗೆರೆ, ತ್ರಿಪುರ ಮತ್ತು ಕೋಗಿಲೆ ಗ್ರಾಮದ 6 ಮಂದಿ ಮುಖ್ಯಸ್ಥರನ್ನು ಕಮಿಟಿಯೊಳಗೆ ಸೇರಿಸಿಕೊಳ್ಳಲಾಗುವುದು. ಕಮಿಟಿ ರಚನೆ ಮಾಡಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಕ್ರಮ ವಹಿಸಲಾಗುವುದು ಎಂದಾಗ ಸಭೆಯಲ್ಲಿದ್ದ ಎರಡೂ ಗ್ರಾಮದ ಜನರು ಶಾಸಕರ ಮಾತಿಗೆ ಒಪ್ಪಿಗೆ ಸೂಚಿಸಿದರು.
ಈ ವೇಳೆ ಬೆಟ್ಟಗೆರೆ ಗ್ರಾಪಂ ಅಧ್ಯಕ್ಷ ದಿನೇಶ್, ತ್ರಿಪುರ ಗ್ರಾಪಂ ಅಧ್ಯಕ್ಷ ರಘು, ಪಪಂ ಸದಸ್ಯ ಮದೀಶ್, ಜಿಪಂ ಎಇಇ ಚನ್ನಬಸಪ್ಪ, ಆರ್‌ಡಬ್ಲೂಯುಎಸ್ ಎಇಇ ಜಯ ಪ್ರಕಾಶ್ ಸೇರಿದಂತೆ ಬೆಟ್ಟಗೆರೆ, ತ್ರಿಪುರ ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.