ರೈತರ ಸಾಲವನ್ನು ಬಲವಂತವಾಗಿ ವಸೂಲಿ ಮಾಡದಂತೆ ಅಧಿಕಾರಿಗಳಿಗೆ ಸೂಚನೆ: ಸಿಎಂ

Update: 2016-10-06 10:41 GMT

ಮೈಸೂರು, ಅ.6: ರಾಜ್ಯದಲ್ಲಿ ತೀವ್ರ ಬರಗಾಲ ಉಂಟಾಗಿರುವುದರಿಂದ ಸಹಕಾರ ಬ್ಯಾಂಕುಗಳ ಮೂಲಕ ರೈತರು ಪಡೆದಿರುವ ಸಾಲವನ್ನು ಬಲವಂತವಾಗಿ ವಸೂಲಿ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಸಾಲ ಮರು ಪಾವತಿಗೆ ನಿಗಧಿಪಡಿಸಿರುವ ಗಡುವು ವಿಸ್ತರಣೆ ಕುರಿತು ಪರಿಶೀಲನೆ ಮಾಡುವುದಾಗಿ ತಿಳಿಸಿದರು. 

ರೈತರು ಆತ್ಮಹತ್ಯೆ  ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದ ಅವರು, ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ ಎಂದರು.  ಬರ ಪರಿಹಾರ ಕಾಮಗಾರಿಗಳಿಗೆ ಹೆಚ್ಚಿನ ನೆರವು ಕೋರಿ ಕೇಂದ್ರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಮತ್ತೊಮ್ಮೆ ಈ ಕುರಿತು ಪ್ರಧಾನಿಯವರನ್ನು ಭೇಟಿ ಮಾಡುವುದಾಗಿ ಹೇಳಿದರು.

ಮಹಾದಾಯಿ ವಿವಾದ ಕುರಿತು ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ಗೋವಾ ಸಿಎಂ ಜೊತೆ ದೂರವಾಣಿ ಮೂಲಕ ಮಾತುಕತೆ  ನಡೆಸಿದ್ದೆ. ಇದೇ ತಿಂಗಳ 21ರಂದು ಮುಂಬಯಿಯಲ್ಲಿ ಸಭೆ ಕರೆದಿರುವುದಾಗಿ ಮಹಾರಾಷ್ಟ್ರ ಸಿಎಂ ಪತ್ರ ಬರೆದಿದ್ದಾರೆ. ಸಭೆಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ.  ಕೃಷ್ಣಾ, ಕಾವೇರಿ ಸೇರಿದಂತೆ ಅಂತಾರಾಜ್ಯ ನದಿ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬುದು ನಮ್ಮ ನಿಲುವು.  ಬಹು ನಿರೀಕ್ಷಿತ ಮೇಕೆದಾಟು ಯೋಜನೆ ಸಂಬಂಧ 5700 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಯೋಜನಾ ವರದಿ ಸಿದ್ಧವಾಗಿದೆ. ಸಂಪುಟ ಸಭೆಯಲ್ಲಿ ಪರಾಮರ್ಶೆ ನಡೆಸಿದ ಬಳಿಕ ಯೋಜನೆಗೆ ಚಾಲನೆ ನೀಡಲಾಗುವುದು. ಇದರಿಂದ ವಿದ್ಯುತ್ ಉತ್ಪಾದನೆ ಮಾಡಲಾಗುವುದು. ಹೆಚ್ಚುವರಿ ನೀರು ಸಂಗ್ರಹಿಸಲಾಗುವುದು ಎಂದರು.

ಕಾವೇರಿ ಕಣಿವೆಯಲ್ಲಿ 18.85 ಲಕ್ಷ ಎಕರೆ ಪ್ರದೇಶದಲ್ಲಿ ಅಚ್ಚುಕಟ್ಟು ಇದೆ. ಈ ಪೈಕಿ 6.15 ಲಕ್ಷ ಎಕರೆಯಲ್ಲಿ ಬೆಳೆ ಇದೆ. ಹೇಮಾವತಿ ಬಲದಂಡೆ ನಾಲೆ ಮೂಲಕ ಈ ಬಾರಿ ಬೆಳೆಗಳಿಗೆ ನೀರು ಬಿಡಲು ಆಗಲಿಲ್ಲ.ಇದರಿಂದ 1.80 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ಹಾಳಾಗಿದೆ. ಉಳಿದ ಪ್ರದೇಶಕ್ಕೆ ನೀರು ಒದಗಿಸಲಾಗುತ್ತಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಒಳಗಾಗಿರುವ ಪ್ರದೇಶಗಳಿಗೆ ಹೆಚ್ಚಿನ ನೆರವು ಕೋರಿ ಶೀಘ್ರವೇ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು. 110 ತಾಲೂಕುಗಳು ಬರಪೀಡಿತ ಎಂದು ನಿನ್ನೆ ಘೋಷಣೆ ಮಾಡಲಾಗಿದೆ. ಇನ್ನೂ ಕೆಲ ತಾಲೂಕುಗಳು ಪಟ್ಟಿಗೆ ಸೇರಬಹುದು ಎಂದು ಸಿಎಂ ನುಡಿದರು. 

ಕಾವೇರಿ ಕಣಿವೆಯ ಸ್ಥಿತಿಗತಿ ಪರಿಶೀಲನೆಗೆ ನೇಮಕಗೊಂಡಿರುವ ಕೇಂದ್ರ ತಂಡ ಇಂದು ಸಂಜೆ ಬೆಂಗಳೂರಿಗೆ ಬರಲಿದ್ದು ನಾಳೆಯಿಂದ ಅಧ್ಯಯನ ನಡೆಸಲಿದೆ ಎಂದು ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿಗಳು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News