ಬಿಜೆಪಿಯಲ್ಲಿ ಶಮನಗೊಳ್ಳದ ಭಿನ್ನಮತ: ಫಲ ನೀಡದ ರಾಷ್ಟ್ರೀಯ ಮುಖಂಡರ ಮಧ್ಯ ಪ್ರವೇಶ

Update: 2016-10-06 14:40 GMT

ಬೆಂಗಳೂರು, ಅ.6: ರಾಜ್ಯ ಬಿಜೆಪಿ ಮುಖಂಡರ ನಡುವಿನ ಅಂತರಿಕ ಭಿನ್ನಮತ ಸದ್ಯಕ್ಕೆ ಶಮನಗೊಳ್ಳುವ ಲಕ್ಷಣಗಳೆ ಕಾಣುತ್ತಿಲ್ಲ. ರಾಷ್ಟ್ರೀಯ ಮುಖಂಡ ರಾಮ್‌ಲಾಲ್ ಮಧ್ಯೆ ಪ್ರವೇಶವಾದರೂ, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಧ್ಯೆದ ಸಂಘರ್ಷಕ್ಕೆ ತೆರೆ ಬಿದ್ದಿಲ್ಲ.

ಗುರುವಾರ ಇಲ್ಲಿನ ಡಾಲರ್ಸ್‌ ಕಾಲನಿಯಲ್ಲಿರುವ ಯಡಿಯೂರಪ್ಪ ನಿವಾಸದಲ್ಲಿ, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್ ಸಮ್ಮುಖದಲ್ಲಿ ಉಭಯ ನಾಯಕರ ಮನವೊಲಿಕೆಗಾಗಿ ಜರುಗಿದ ಬಿಜೆಪಿ ಕೋರ್ ಕಮಿಟಿ ಸಭೆ ವಿಫಲವಾಗಿದೆ ಎಂದು ಗೊತ್ತಾಗಿದೆ.

ಉಪಾಹಾರ ಕೂಟದ ನೆಪದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆಯಲು ರಾಮ್ ಲಾಲ್ ನಡೆಸಿದ ಪ್ರಯತ್ನ ಯಾವುದೇ ಫಲ ನೀಡಲಿಲ್ಲ. ನಾಯಕರಿಬ್ಬರೂ ವೈಯಕ್ತಿಕವಾಗಿ ಸ್ನೇಹಿತರಂತೆ ಕಾಣಿಸಿಕೊಂಡರೂ, ಪಕ್ಷ ಸಂಘಟನೆ ಮತ್ತು ರಾಜಕೀಯ ವಿಚಾರದಲ್ಲಿ ಭಿನ್ನರಾಗಿದ್ದಾರೆ.

ಬ್ರಿಗೇಡ್ ಸಮಾವೇಶ ಬೇ: ಯಡಿಯೂರಪ್ಪ ಆದೇಶವನ್ನು ಲೆಕ್ಕಿಸದೆ ಹಾವೇರಿಯಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶ ನಡೆಸಿದ ಈಶ್ವರಪ್ಪಗೆ, ಇನ್ನು ಮುಂದೆ ಬ್ರಿಗೇಡ್ ಹೆಸರಿನಲ್ಲಿ ಯಾವುದೇ ಸಮಾವೇಶ ನಡೆಸಬೇಡಿ ಎಂದು ರಾಮ್‌ಲಾಲ್ ತಾಕೀತು ಮಾಡಿದ್ದಾರೆ.

ನಿನ್ನೆ ರಾತ್ರಿ 1ಗಂಟೆಯ ವರೆಗೂ ಈಶ್ವರಪ್ಪ ಅವರನ್ನು ಮನವೋಲಿಸಿದ ರಾಮ್ ಲಾಲ್, ತಾವು ಏನೇ ಮಾಡಿದರೂ, ಪಕ್ಷದ ವೇದಿಕೆಯಲ್ಲೇ ಪಕ್ಷಕ್ಕೆ ಲಾಭ ಆಗುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಭಿನ್ನಮತ ಸುಳಿಯಬಾರದು ಎಂದು ನಿರ್ದೇಶಿಸಿದ್ದಾರೆಂದು ಗೊತ್ತಾಗಿದೆ.

ಬಿಎಸ್‌ವೈ ನಿವಾಸಕ್ಕೆ ಉಪಾಹಾರ ಕೂಟಕ್ಕೆ ಆಗಮಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಉಪಾಹಾರ ಕೂಟಕ್ಕೆ ಕೆ.ಎಸ್.ಈಶ್ವರಪ್ಪ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ, ಆರ್.ಅಶೋಕ್, ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಸಂಸದ ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ ಸೇರಿ ಹಲವು ಮಂದಿ ಪಾಲ್ಗೊಂಡಿದ್ದರು.

ಯಡ್ಡಿಗೆ ಸೆಡ್ಡು: ರಾಷ್ಟ್ರೀಯ ಮುಖಂಡರ ಮನವೊಲಿಕೆಗೂ ಜಗ್ಗದ ಈಶ್ವರಪ್ಪ ತುಮಕೂರಿನಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶ ನಡೆಸಲು ಅ.8ರ ಶನಿವಾರ ಬೆಳಗ್ಗೆ 10ಗಂಟೆಗೆ ಬಿ.ಎಚ್. ರಸ್ತೆಯಲ್ಲಿನ ಜೈನ್ ಸಮುದಾಯ ಭವನದಲ್ಲಿ ಸಂಘಟನಾ ಸಭೆಯನ್ನು ಏರ್ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News