ಬರ ಪೀಡಿತ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ ಮೂರು ತಾಲೂಕುಗಳ ಸೇರ್ಪಡೆ

Update: 2016-10-06 16:37 GMT

 ಶಿವಮೊಗ್ಗ, ಅ.6: ರಾಜ್ಯ ಸರಕಾರ ಪ್ರಕಟಿಸಿರುವ ಬರ ಪೀಡಿತ ತಾಲೂಕುಗಳ ಎರಡನೆ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಸೊರಬ ಹಾಗೂ ಶಿವಮೊಗ್ಗ ತಾಲೂಕುಗಳು ಸ್ಥಾನ ಪಡೆದುಕೊಂಡಿವೆ. ಈ ಮೂಲಕ ಒಟ್ಟಾರೆ ಜಿಲ್ಲೆಯ ಆರು ತಾಲೂಕುಗಳು ಬರ ಪೀಡಿತ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಂತಾಗಿದೆ. ಈ ಮೊದಲು ಜಿಲ್ಲೆಯ ಸಾಗರ, ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕು ಬರ ಪೀಡಿತವೆಂದು ಸರಕಾರ ಘೋಷಣೆ ಮಾಡಿತ್ತು. ಪ್ರಸ್ತುತ ಜಿಲ್ಲೆಯ ಭದ್ರಾವತಿ ತಾಲೂಕು ಮಾತ್ರ ಬರ ಪೀಡಿತ ಪಟ್ಟಿಯಿಂದ ಹೊರಗಿದೆ. ಮುಂದಿನ ದಿನಗಳಲ್ಲಿ ಆ ತಾಲೂಕನ್ನು ಕೂಡ ಬರ ಪೀಡಿತವೆಂದು ಘೋಷಿಸುವ ಸಾಧ್ಯತೆಯಿದೆ ಎಂದು ಕಂದಾಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಹೆಚ್ಚಾಗಿದ್ದ ಆಕ್ಷೇಪ: ಪ್ರಸ್ತುತ ಮುಂಗಾರು ಅವಧಿಯಲ್ಲಿ ಜಿಲ್ಲೆಯಾದ್ಯಂತ ಮಳೆಯ ತೀವ್ರ ಕೊರತೆ ಎದುರಾಗಿದೆ. ಬಹುತೇಕ ಎಲ್ಲ ತಾಲೂಕುಗಳಲ್ಲಿ ವಾಡಿಕೆಯ ಮಳೆಯೂ ಬಿದ್ದಿಲ್ಲ. ಪ್ರಮುಖ ಜಲಾಶಯ, ಕೆರೆಕಟ್ಟೆಗಳು ನೀರಿಲ್ಲದೆ ಬರಿದಾಗಿವೆ. ವರ್ಷಧಾರೆಯ ಅಭಾವದಿಂದ ಕೃಷಿ ಚಟುವಟಿಕೆಯ ಮೇಲೆ ಪರಿಣಾಮ ಬೀರುವಂತೆ ಮಾಡಿದ್ದು, ಒಟ್ಟಾರೆ ಇಡೀ ಜಿಲ್ಲೆಯಾದ್ಯಂತ ಬರಗಾಲದ ಕರಿಛಾಯೆ ಆವರಿಸಿದೆ.

ಕಳೆದ ತಿಂಗಳು ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಜಿಲ್ಲೆಯ ಎಲ್ಲ ಏಳು ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸಬೇಕೆಂಬ ಸರ್ವಾನುಮತದ ನಿರ್ಣಯ ಅಂಗೀಕರಿಸಿ, ರಾಜ್ಯ ಸರಕಾರಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪ ಅವರು ಶಿವಮೊಗ್ಗ ಜಿಲ್ಲೆಯವರೇ ಆಗಿದ್ದ ಕಾರಣದಿಂದ ಇಡೀ ಜಿಲ್ಲೆ ಬರ ಪೀಡಿತ ಎಂದು ಘೋಷಣೆಯಾಗುವ ನಿರೀಕ್ಷೆ ಸ್ಥಳೀಯ ಜನಪ್ರತಿನಿಧಿಗಳದ್ದಾಗಿತ್ತು. ಆದರೆ ಕಳೆದ ಕೆಲ ದಿನಗಳ ಹಿಂದೆ ರಾಜ್ಯ ಸರಕಾರ ಪ್ರಕಟಿಸಿದ ಪ್ರಥಮ ಹಂತದ ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಜಿಲ್ಲೆಯ ಕೇವಲ ಮೂರು ತಾಲೂಕುಗಳು, ಅದರಲ್ಲಿಯೂ ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳು ಸ್ಥಾನ ಪಡೆದುಕೊಂಡಿದ್ದವು. ಇದು ಇತರೆ ತಾಲೂಕುಗಳ ಜನಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕಾ, ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ, ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ.ರಾಘವೇಂದ್ರ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ತಮ್ಮ ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸಬೇಕೆಂದು ಆಗ್ರಹಿಸಿದ್ದರು. ಈ ನಡುವೆ ಕೆಲ ತಾಲೂಕುಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಲು ಕೂಡ ವಿರೋಧ ಪಕ್ಷಗಳು ನಿರ್ಧರಿಸಿದ್ದವು. ಈ ನಡುವೆ ರಾಜ್ಯ ಸರಕಾರ ಪ್ರಕಟಿಸಿರುವ ಎರಡನೆ ಹಂತದ ಪಟ್ಟಿಯಲ್ಲಿ ಜಿಲ್ಲೆಯ ಮತ್ತೆ ಮೂರು ತಾಲೂಕುಗಳು ಬರ ಪೀಡಿತವೆಂದು ಘೋಷಣೆ ಮಾಡಲಾಗಿದೆ. ಈ ಮೂಲಕ ತವರು ಜಿಲ್ಲೆಯ ಕೆಲ ತಾಲೂಕುಗಳಲ್ಲಿ ತಮ್ಮ ವಿರುದ್ಧ ನಡೆಯಬಹುದಾಗಿದ್ದ ಪ್ರತಿಭಟನೆಗಳಿಗೆ ಕಾಗೋಡು ತಿಮ್ಮಪ್ಪಪೂರ್ಣ ವಿರಾಮ ಹಾಕಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News