ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ರೈತರಿಗೆ ನ್ಯಾಯ ಕಲ್ಪಿಸಿ: ಶಾಸಕಿ ಶಾರದಾ

Update: 2016-10-06 16:38 GMT

ಶಿವಮೊಗ್ಗ, ಅ.6: ಮನಸೋ ಇಚ್ಛೆ ಬೆಳೆ ಹಾನಿ ಸಮೀಕ್ಷೆ ನಡೆಸುವುದನ್ನು ನಿಲ್ಲಿಸಿ. ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ರೈತರಿಗೆ ನ್ಯಾಯ ಕಲ್ಪಿಸುವ ಕೆಲಸ ಮಾಡಿ. ಬೇಕಾಬಿಟ್ಟಿಯಾಗಿ ವರದಿ ಸಿದ್ಧ್ದಪಡಿಸಿದರೆ ಶಿಸ್ತುಕ್ರಮ ಜರಗಿಸುವುದು ನಿಶ್ಚಿತ ಎಂದು ಶಾಸಕಿ ಶಾರದಾ ಪೂರ್ಯನಾಯ್ಕಿ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಳೆ ಹಾನಿ ಸಮೀಕ್ಷೆ ನಡೆಸುವ ಮುನ್ನ ಜಮೀನಿನ ರೈತ, ಆ ಭಾಗದ ಜನಪ್ರತಿನಿಧಿ, ಗ್ರಾಪಂ ಅಧಿಕಾರಿಗಳನ್ನು ಸಹ ಕರೆದುಕೊಂಡು ಹೋಗಿ ವರದಿ ಸಂಗ್ರಹಿಸಿ. ಎಲ್ಲೋ ಕುಳಿತು ವರದಿ ಸಿದ್ಧಪಡಿಸುವ ಕೆಲಸ ಮಾಡಬೇಡಿ. ಈ ವಿಷಯದಲ್ಲಿ ಕರ್ತವ್ಯ ಲೋಪ ಎಸಗಿದ್ದು ಕಂಡುಬಂದರೆ ಶಿಸ್ತು ಕ್ರಮ ಜರಗಿಸಲಾಗುವುದು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ತಾಲೂಕಿನಲ್ಲಿ ಮಳೆ ಕೊರತೆಯಿಂದ ಹಲವೆಡೆ ಬರಗಾಲದ ಪರಿಸ್ಥಿತಿಯಿದೆ. ಇಂತಹ ಸಂದಭರ್ದಲ್ಲಿ ನಾಗರಿಕರಿಗೆ ತೊಂದರೆಯಾಗದ ರೀತಿಯಲ್ಲಿ, ಗೊಂದಲಕ್ಕೆ ಆಸ್ಪದವಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಿ. ಕಾಲಮಿತಿಯಲ್ಲಿ ನಾಗರಿಕರಿಗೆ ಸೌಲಭ್ಯ ತಲುಪಿಸುವ ಕೆಲಸ ಮಾಡಿ ಎಂದು ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು. ಮಾಹಿತಿ: ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ಮಾತನಾಡಿ, ಶಿವಮೊಗ್ಗ ತಾಲೂಕನ್ನು ಬರಪೀಡಿತ ಎಂದು ಸರಕಾರ ಘೋಷಿಸಿದೆ. ತಾಲೂಕಿನಲ್ಲಿ ನಿಗದಿತ ಪ್ರಮಾಣದ ಮಳೆ ಬಿದ್ದಿಲ್ಲ. ಸಾಕಷ್ಟು ಬೆಳೆ ಹಾನಿಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ತಾಲೂಕಿನಲ್ಲಿ 754 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 554 ಮಿ.ಮೀ. ಮಾತ್ರ ಮಳೆ ಬಿದ್ದಿದೆ. ಶೇ.26 ರಷ್ಟು ಕಡಿಮೆ ಮಳೆಯಾಗಿದೆ. ಹೊಳಲೂರು, ಹಾರನಹಳ್ಳಿ, ಕುಂಸಿ ಮತ್ತು ಆಯನೂರು ಹೋಬಳಿಯಲ್ಲಿ ಮೆಕ್ಕೆಜೋಳ ಮತ್ತು ಭತ್ತವನ್ನು ಬೆಳೆಯಲಾಗುತ್ತದೆ. ಸುಮಾರು 4 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಹಾನಿಯಾಗಿದೆ. ಇದು ಒಟ್ಟು ಬೆಳೆಯ ಶೇ. 33 ಕ್ಕೂ ಹೆಚ್ಚು ಪ್ರಮಾಣದಲ್ಲಿ ನಷ್ಟವಾದಂತಾಗಿದೆ. ಸೆಪ್ಟೆಂಬರ್ ಅಂತ್ಯದವರೆಗೆ ನಡೆಸಿದ ಸಮೀಕ್ಷೆಯಲ್ಲಿ ಈ ಹಾನಿಕಂಡು ಬಂದಿದೆ ಎಂದರು.

 ನೀರಾವರಿ ಪ್ರದೇಶದಲ್ಲಿ ಭತ್ತ ಕಾಳುಕಟ್ಟುವ ಹಂತದಲ್ಲಿದೆ. ಆದರೂ ಸುಮಾರು 3 ಸಾವಿರ ಹೆಕ್ಟೇರ್ ಭತ್ತ ಹಾನಿಯಾಗಿದೆ. ಆಯನೂರು ಭಾಗದ ಕೆಲವು ಗ್ರಾಮಗಳಲ್ಲಿ ಅಲ್ಪಪ್ರಮಾಣದಲ್ಲಿ ಮಳೆಯಾಶ್ರಿತ ರಾಗಿಯನ್ನು ಬೆಳೆಯಲಾಗಿದೆ. ಶೇ.33ಕ್ಕಿಂತ ಹೆಚ್ಚು ಬೆಳೆ ಹಾನಿಯಾದರೆ ಮಾತ್ರ ರೈತರಿಗೆ ಸಬ್ಸಿಡಿ ನೀಡಲು ಅವಕಾಶವಿದೆ ಎಂದರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷ ವೇದಾ ವಿಜಯಕುಮಾರ್, ತಾಪಂ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷೆ ನಿರ್ಮಲಾ, ಸಿಇಒ ಮೂಕಪ್ಪಗೌಡ, ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News