ಡಾ. ಕೆ.ಎ.ಅಶೋಕ್‌ಪೈ ಪಾರ್ಥಿವ ಶರೀರ ಅಂತ್ಯ ಸಂಸ್ಕಾರ

Update: 2016-10-06 16:38 GMT

ಶಿವಮೊಗ್ಗ, ಅ.6: ಸ್ಕಾಟ್ಲೆಂಡ್ ದೇಶದಲ್ಲಿ ಸೆ.29ರಂದು ಹೃದಯಾಘಾತದಿಂದ ನಿಧನರಾದ ಅಂತಾರಾಷ್ಟ್ರೀಯ ಖ್ಯಾತಿಯ ಮನೋವೈದ್ಯ, ರಾಜ್ಯ ಮಾನಸಿಕ ಆರೊಗ್ಯ ಪಡೆಯ ಕಾರ್ಯಾಧ್ಯಕ್ಷರಾದ ಡಾ. ಕೆ.ಎ.ಅಶೋಕ್ ಪೈರವರ ಮೃತದೇಹದ ಅಂತ್ಯ ಸಂಸ್ಕಾರವು ಗುರುವಾರ ಮಧ್ಯಾಹ್ನ ನಗರದ ರೋಟರಿ ಚಿತಾಗಾರದಲ್ಲಿ ನೆರವೇರಿತು.

ಇದಕ್ಕೂ ಮುನ್ನ ಪಾರ್ಥಿವ ಶರೀರವನ್ನು ಗೋಪಿ ವೃತ್ತ ಸಮೀಪದ ಸವಾರ್‌ಲೈನ್ ರಸ್ತೆಯಲ್ಲಿರುವ ನಿವಾಸದಿಂದ ಮೆರವಣಿಗೆಯಲ್ಲಿ ಚಿತಾಗಾರಕ್ಕೆ ತರಲಾಯಿತು. ಮೆರವಣಿಗೆಯಲ್ಲಿ ನೂರಾರು ಜನ ಭಾಗವಹಿಸಿದ್ದರು. ಆಗಮನ: 

ಸೆ. 5ರಂದು ಸ್ಕಾಟ್ಲೆಂಡ್‌ನಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಮೃತದೇಹ ತರಲಾಗಿತ್ತು. ಆ್ಯಂಬುಲೆನ್ಸ್ ಮೂಲಕ ಶಿವಮೊಗ್ಗ ನಗರಕ್ಕೆ ಗುರುವಾರ ಮುಂಜಾನೆ ತಂದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆಲ್ಕೋಳದಲ್ಲಿರುವ ಮಾನಸಾಧಾರ ಕಟ್ಟಡ, ಸರಕಾರಿ ಮೆಗ್ಗಾನ್ ಆಸ್ಪತ್ರೆ ಹಿಂಭಾಗದಲ್ಲಿರುವ ಐಎಂಎ ಹಾಗೂ ಮಾನಸ ನರ್ಸಿಂಗ್ ಹೋಂ ಆವರಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಂತಿಮ ನಮನ:

ಗಣ್ಯರು, ಸಂಘ ಸಂಸ್ಥೆ ಮುಖಂಡರು ಸೇರಿದಂತೆ ನೂರಾರು ಜನರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಆಹಾರ ಇಲಾಖೆ ಸಚಿವ ಯು.ಟಿ.ಖಾದರ್, ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪ, ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಜಿಪಂ ಸಿಇಒ ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠ ಅಭಿನವ್ ಖರೆ ಸೇರಿದಂತೆ ಹಲವರು ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವಿರಿಸಿ ಅಂತಿಮ ನಮನ ಸಲ್ಲಿಸಿದರು. ಆಹಾರ ಇಲಾಖೆ ಸಚಿವ ಯು.ಟಿ.ಖಾದರ್ ಅಂತಿಮ ನಮನ ಸಲ್ಲಿಸಿ, ತದನಂತರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಡಾ. ಕೆ.ಎ.ಅಶೋಕ್ ಪೈ ನಿಧನದಿಂದ ಮನೋವೈದ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆಎಂದು ಶೋಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News